ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ: ವಿಶೇಷ ಪಿಪಿ ನೇಮಕಕ್ಕೆ ಹೈಕೋರ್ಟ್ ಮತ್ತೆ ತಡೆಯಾಜ್ಞೆ
ಉಡುಪಿ, ಮಾ.12: ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ವಿಶೇಷ ಅಭಿಯೋಜಕರಾಗಿ ನ್ಯಾಯವಾದಿ ಶಾಂತಾರಾಮ್ ಶೆಟ್ಟಿ ಅವರನ್ನು ಮುಂದು ವರಿಸಿರುವ ರಾಜ್ಯ ಸರಕಾರದ ಆದೇಶಕ್ಕೆ ಹೈಕೋರ್ಟ್ ಮತ್ತೆ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಪ್ರಕರಣದ ವಿಶೇಷ ಅಭಿಯೋಜಕರಾಗಿ ಶಾಂತರಾಮ್ ಶೆಟ್ಟಿ ಅವರನ್ನು ರಾಜ್ಯ ಸರಕಾರ 2016ರ ಅ.26ರಂದು ನೇಮಕಗೊಳಿಸಿದ ಆದೇಶದ ವಿರುದ್ಧ ಪ್ರಕರಣದ ಆರೋಪಿ ರಾಜೇಶ್ವರಿ ಶೆಟ್ಟಿ ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದರು. ಇದರ ತೆರವಿಗೆ ಭಾಸ್ಕರ್ ಶೆಟ್ಟಿ ತಾಯಿ ಗುಲಾಬಿ ಶೆಡ್ತಿ ಹೈಕೋಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ಈ ಬಗ್ಗೆ ವಿಚಾರಣೆ ನಡೆಸಿದ ಹೈಕೋರ್ಟ್ ಜ.31ರಂದು ತಡೆಯಾಜ್ಞೆಯನ್ನು ತೆರವುಗೊಳಿಸಿ ಈ ಬಗ್ಗೆ ಅಕ್ಷೇಪಗಳಿದ್ದರೆ ಸರಕಾರಕ್ಕೆ ಸಲ್ಲಿಸು ವಂತೆ ರಾಜೇಶ್ವರಿ ಶೆಟ್ಟಿಗೆ ಸೂಚಿಸಿತು.
ಅದರಂತೆ ರಾಜೇಶ್ವರಿ ಶೆಟ್ಟಿ ವಿಶೇಷ ಅಭಿಯೋಜಕ ನೇಮಕ ಕುರಿತ ಆಕ್ಷೇಪಣೆ ಯನ್ನು ಫೆಬ್ರವರಿ ಮೊದಲ ವಾರದಲ್ಲಿ ರಾಜ್ಯ ಗೃಹ ಕಾರ್ಯದರ್ಶಿಗೆ ಸಲ್ಲಿಸಿ ದ್ದರು. ಈ ಆಕ್ಷೇಪಣೆಗೆ ಪ್ರತಿಯಾಗಿ ಗುಲಾಬಿ ಶೆಡ್ತಿ ತನ್ನ ಆಕ್ಷೇಪಣೆಯನ್ನು ಫೆ.22ರಂದು ಸಲ್ಲಿಸಿದ್ದರು. ನಂತರ ಗೃಹ ಇಲಾಖೆಯು ಶಾಂತಾರಾಮ್ ಶೆಟ್ಟಿ ಅವರನ್ನು ವಿಶೇಷ ಅಭಿಯೋಜಕರಾಗಿ ಮುಂದುವರೆಸಿ ಆದೇಶ ನೀಡಿತು.
ಶಾಂತಾರಾಮ್ ಶೆಟ್ಟಿ ಅವರನ್ನು ವಿಶೇಷ ಅಭಿಯೋಜಕರಾಗಿ ಮುಂದುವರೆಸುವ ಆದೇಶ ನೀಡುವ ಮೊದಲು ಗೃಹ ಇಲಾಖೆ ನನ್ನ ಆಕ್ಷೇಪಣೆಯನ್ನು ಸರಿ ಯಾಗಿ ಪರಿಗಣಿಸಿಲ್ಲ ಎಂಬುದಾಗಿ ಆರೋಪಿಸಿ ರಾಜೇಶ್ವರಿ ಶೆಟ್ಟಿ ಮತ್ತೆ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದರು. ಇದನ್ನು ಪರಿಗಣಿಸಿದ ಹೈಕೋರ್ಟ್ ಮಾ.20ರಂದು ವಿಶೇಷ ಅಭಿಯೋಜಕರ ನೇಮಕಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿ, ಮುಂದಿನ ವಿಚಾರಣೆಯನ್ನು ಎ.6ಕ್ಕೆ ಮುಂದೂಡಿ ಆದೇಶ ನೀಡಿದೆ.
ಎ.9ಕ್ಕೆ ಮುಂದೂಡಿಕೆ: ವಿಶೇಷ ಅಭಿಯೋಜಕರ ನೇಮಕಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿರುವ ಹಿನ್ನೆಲೆಯಲ್ಲಿ ಆರೋಪಿ ನಂದಳಿಕೆ ನಿರಂಜನ್ ಭಟ್ ಜಾಮೀನು ಅರ್ಜಿ ವಿಚಾರಣೆಯನ್ನು ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎ.9ಕ್ಕೆ ಮುಂದೂಡಿ ಆದೇಶ ನೀಡಿದೆ.
ತಡೆಯಾಜ್ಞೆಯ ಕಾರಣ ಶಾಂತರಾಮ್ ಶೆಟ್ಟಿಯ ಬದಲು ಜಿಲ್ಲಾ ಸರಕಾರಿ ಅಭಿಯೋಜಕಿ ಶಾಂತಿ ಬಾಯಿ ಇಂದು ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸಮಯಾವಕಾಶ ಕೇಳಿದರು. ಇದನ್ನು ಪರಿಗಣಿಸಿದ ನ್ಯಾಯಾಧೀಶ ವೆಂಕಟೇಶ್ ನಾಯ್ಕಾ ವಿಚಾರಣೆಯನ್ನು ಮುಂದೂಡಿದರು.







