ಬನಶಂಕರಿ ಪೊಲೀಸ್ ಠಾಣೆ, ಐಡಿಬಿಐ ಬ್ಯಾಂಕ್ ಶಾಖೆಯ ವ್ಯವಸ್ಥಾಪಕರಿಗೆ ಹೈಕೋರ್ಟ್ ನೋಟಿಸ್
ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ ಬ್ಯಾಂಕ್ ಖಾತೆ ಸ್ಥಗಿತ

ಬೆಂಗಳೂರು, ಮಾ.28: ತಮ್ಮ ಬ್ಯಾಂಕ್ ಖಾತೆ ಸ್ಥಗಿತಗೊಳಿಸಿರುವ ಕ್ರಮ ಪ್ರಶ್ನಿಸಿ ಖ್ಯಾತ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ ಸಲ್ಲಿಸಿರುವ ರಿಟ್ ಅರ್ಜಿಗೆ ಸಂಬಂಧಿಸಿದಂತೆ ಬನಶಂಕರಿ ಪೊಲೀಸ್ ಠಾಣೆ ಹಾಗೂ ಐಡಿಬಿಐ ಬ್ಯಾಂಕ್‌ನ ಮಲ್ಲೇಶ್ವರ ಶಾಖೆಯ ವ್ಯವಸ್ಥಾಪಕರಿಗೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್ ಆದೇಶಿಸಿದೆ.
ಈ ಕುರಿತಂತೆ ಪ್ರಕಾಶ್ ಪಡುಕೋಣೆ, ಅವರ ಪತ್ನಿ ಉಜಾಲಾ ಪಡುಕೋಣೆ ಹಾಗೂ ಪುತ್ರಿ ಅನಿಷಾ ಪಡುಕೋಣೆ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.
ಬ್ಯಾಂಕ್ ಖಾತೆ ಸ್ಥಗಿತಗೊಳಿಸುವ ಮುನ್ನ ನನಗೆ ಯಾವುದೇ ಮುನ್ಸೂಚನೆ ನೀಡಿಲ್ಲ ಎಂಬುದು ಅರ್ಜಿದಾರರ ಆಕ್ಷೇಪ. ಷೇರು ಮಾರುಕಟ್ಟೆಗೆ ಹೂಡಿಕೆ ಸೋಗಿನಲ್ಲಿ ನೂರಾರು ಗ್ರಾಹಕರಿಂದ ಕೋಟ್ಯಂತರ ಹಣ ಪಡೆದು ವಂಚಿಸಲಾಗಿದೆ ಎಂಬ ಆರೋಪವನ್ನು ವಿಕ್ರಂ ಇನ್‌ವೆಸ್ಟ್‌ಮೆಂಟ್ ಕಂಪೆನಿ ಎದುರಿಸುತ್ತಿದೆ. ಈ ಕಂಪೆನಿಯಲ್ಲಿ ಪ್ರಕಾಶ್ ಪಡುಕೋಣೆ ಕೂಡಾ ಹಣ ಹೂಡಿಕೆ ಮಾಡಿದ್ದು ಅವರ ಬ್ಯಾಂಕ್ ಖಾತೆ ವ್ಯವಹಾರವನ್ನು ಸ್ಥಗಿತಗೊಳಿಸಲಾಗಿದೆ.





