ಮಂಗಳೂರು; ಕೊಲೆ ಯತ್ನ, ಗಾಂಜಾ ಮಾರಾಟ ಪ್ರಕರಣ: ಆರೋಪಿ ಸೆರೆ

ಮಂಗಳೂರು, ಮಾ. 28: ಕೊಲೆ ಯತ್ನ ಮತ್ತು ಗಾಂಜಾ ಮಾರಾಟ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಮುಳ್ಳುಗುಡ್ಡೆ ಇಮ್ತಿಯಾಝ್ ಎಂಬಾತನನ್ನು ಬುಧವಾರ ಕೊಟೆಕಾರು ಗ್ರಾಮದ ಅಜೀನಡ್ಕ ಎಂಬಲ್ಲಿ ಮಂಗಳೂರು ದಕ್ಷಿಣ ಉಪವಿಭಾಗದ ಎಸಿಪಿ ರಾಮ ರಾವ್ ನೇತೃತ್ವದ ರೌಡಿ ನಿಗ್ರಹ ದಳದ ಸಿಬ್ಬಂದಿ ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಈ ಹಿಂದೆ ಕೊಣಾಜೆ ಠಾಣೆ ವ್ಯಾಪ್ತಿಯ ಕೇರಳ ಗಡಿ ಪ್ರದೇಶವಾದ ನೆತ್ತಿಲಪದವು ಎಂಬಲ್ಲಿ ಮುಹಮ್ಮದ್ ಅಝೀಝ್, ಅಬ್ದುಲ್ ಅಝೀಝ್ ಮತ್ತು ಇಮ್ತಿಯಾಝ್ ಎಂಬವರು ಆಕ್ಟೀವಾ ಸ್ಕೂಟರ್‌ನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದಾರೆ ಎಂಬ ಬಗ್ಗೆ ರೌಡಿ ನಿಗ್ರಹದಳದವರು ಮಾಹಿತಿ ಪಡೆದಿದ್ದರು. ಅದರಂತೆ ಕಾರ್ಯಾಚರಣೆ ನಡೆಸಿ, ನೆತ್ತಿಲಪದವು ಕಲ್ಲರಕೋಡಿ ಎಂಬಲ್ಲಿ ಸುಮಾರು 10.250 ಕೆ.ಜಿ. ಗಾಂಜಾ ಮತ್ತು ಸ್ಕೂಟರನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ.
ಆರೋಪಿ ಅಝೀಝ್ ಎಂಬಾತನನ್ನು ಈ ಹಿಂದೆ ವಶಕ್ಕೆ ಪಡೆದಿದ್ದು, ಆತ ಕಾರಾಗೃಹದಲ್ಲಿದ್ದಾನೆ. ಈತ ಈ ಹಿಂದೆ ಉಳ್ಳಾಲ ಠಾಣೆ ವ್ಯಾಪ್ತಿಯ ಮುಳ್ಳುಗುಡ್ಡೆ ಎಂಬಲ್ಲಿ ಪಚ್ಚಿಲ ಅಝೀಝ್ ಎಂಬಾತನಿಗೆ ಮಾರಣಾಂತಿಕ ಹಲ್ಲೆ ನಡೆಸಿ, ಪರಾರಿಯಾಗಿ ತಲೆಮರೆಸಿಕೊಂಡಿದ್ದ. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈತನ ವಿರುದ್ಧ ಈ ಹಿಂದೆ ಉಳ್ಳಾಲ ಠಾಣೆ, ಕೊಣಾಜೆ ಠಾಣೆ ಹಾಗೂ ಕಾವೂರು ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ. ಮುಂದಿನ ಕ್ರಮದ ಬಗ್ಗೆ ಕೊಣಾಜೆ ಠಾಣೆಗೆ ಹಸ್ತಾಂತರಿಸಲಾಗಿದೆ. ಮಂಗಳೂರು ದಕ್ಷಿಣ ಉಪ ವಿಭಾಗದ ಎ.ಸಿ.ಪಿ. ಅವರ ನೇತೃತ್ವದ ರೌಡಿ ನಿಗ್ರಹ ದಳದ ಸಿಬ್ಬಂದಿ ಮತ್ತು ಪಿ.ಎಸ್.ಐ. ಅಪರಾಧ ಪತ್ತೆ ದಳ, ಕೊಣಾಜೆ ಠಾಣೆ ಸಿಬ್ಬಂದಿಗಳು ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.







