ಕಾಂಗ್ರೆಸ್- ಜೆಡಿಎಸ್ ನ ಜಾತಿ ಲೆಕ್ಕಾಚಾರ ಫಲಿಸದು: ಸಿಟಿ ರವಿ

ಚಿಕ್ಕಮಗಳೂರು, ಮಾ.28: ಬಿಜೆಪಿ ಜನ ಸಾಮಾನ್ಯರ ಪಕ್ಷವಾಗಿದೆ. ಸಾಮಾನ್ಯ ಕಾರ್ಯಕರ್ತನಾಗಿದ್ದ ನನಗೆ ಪಕ್ಷ ಟಿಕೆಟ್ ನೀಡಿತ್ತು. ಕ್ಷೇತ್ರ ಜನತೆ ಶಾಸಕನ್ನನಾಗಿ ಮಾಡಿದ್ದಾರೆ. ತನ್ನ ಕೆಲಸ, ಅಭಿವೃದ್ಧಿ ಮೆಚ್ಚಿ ಮೂರು ಬಾರಿ ಗೆಲ್ಲಿಸಿದ್ದಾರೆ. ಮುಂದೆಯೂ ಗೆಲ್ಲಿಸುತ್ತಾರೆ. ಈ ಬಾರಿಯ ಚುನಾವಣೆಯಲ್ಲಿ ಜಾತಿ ಆಧಾರದ ಮೇಲೆ ತನ್ನನ್ನು ಸೋಲಿಸಲು ಕಾಂಗ್ರೆಸ್-ಜೆಡಿಎಸ್ ಷಡ್ಯಂತ್ರ ರೂಪಿಸಿದ್ದು, ಅದು ವರ್ಕೌಟ್ ಆಗುವುದಿಲ್ಲ ಎಂದು ಶಾಸಕ ಸಿ.ಟಿ.ರವಿ ತಿಳಿಸಿದ್ದಾರೆ.
ನಗರದ ವಿಜಯಪುರ ಬಡಾವಣೆಯ ಗಣಪತಿ ಪೆಂಡಾಲ್ ಮೈದಾನದಲ್ಲಿ ಬಿಜೆಪಿ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ 'ಪ್ರಗತಿಪಥ-ವಿಶ್ವಾಸದ ನಡಿಗೆ' ಪಾದಯಾತ್ರೆ ಕಾರ್ಯಕ್ರಮದ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ಜಾತಿ ಹೆಸರಿನಲ್ಲಿ ನನ್ನನ್ನು ಸೋಲಿಸುವ ಷಡ್ಯಂತ್ರ ರೂಪಿಸಿದ್ದಾರೆ. ಆದರೆ ಅವರ ಈ ಲೆಕ್ಕಾಚಾರ ಫಲಿಸುವುದಿಲ್ಲ. ಸೈದ್ಧಾಂತಿಕ ಬದ್ಧತೆ ಮತ್ತು ಭೂತ್‍ಮಟ್ಟದ ಕಾರ್ಯಕರ್ತರ ಸಾಮರ್ಥ್ಯದ ಮೇಲೆ ನನ್ನ ಗೆಲುವು ಶತಸಿದ್ಧ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಚಿಕ್ಕಮಗಳೂರಿಗೆ ಬಂದಾಗ ಸಿ.ಟಿ.ರವಿಗೆ ಹವಾಯ್ ಚಪ್ಪಲಿ ಇರಲಿಲ್ಲ ಎಂದು ವಿರೋಧಿಗಳು ಟೀಕಿಸುತ್ತಿದ್ದಾರೆ. ಆದರೆ ಇದು ಬಿಜೆಪಿ ಪಕ್ಷದ ಹೆಗ್ಗಳಿಕೆಯಾಗಿದ್ದು, ಪಕ್ಷ ಚಪ್ಪಲಿ ಇಲ್ಲದವನ್ನನ್ನೂ ಬೆಳೆಸುತ್ತದೆ ಎಂಬುದಕ್ಕೆ ನಾನೇ ಸಾಕ್ಷಿ ಎಂದು ಅವರು, ಸಾಮಾನ್ಯನಾದ ನನ್ನನ್ನು ಪಕ್ಷ ಗುರುತಿಸಿದೆ. ಶಾಸಕನನ್ನಾಗಿ ಮಾಡಿದೆ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ದತ್ತಪೀಠಕ್ಕೆ ಮಾಲಾಧಾರಿಗಳಾಗಿ ಪಡಿಭಿಕ್ಷೆ ಎತ್ತಿದ್ದನ್ನು ಟೀಕಿಸಿದ್ದಾರೆ. ಅವರಿಗೆ ದತ್ತಪೀಠದ ಮಹತ್ವ ಗೊತ್ತಿಲ್ಲ. ಅವರು ದತ್ತಮಾಲಾಧಾರಿಗಳನ್ನು ಭಿಕ್ಷೆ ಎತ್ತುತ್ತಿದ್ದಾರೆ ಎನ್ನುವ ಮೂಲಕ ಅವಮಾನಿಸಿದ್ದಾರೆ ಎಂದು ಕಿಡಿಕಾರಿದ ರವಿ, ಜೆಡಿಎಸ್ ಮತ್ತು ಕಾಂಗ್ರೆಸ್ ದತ್ತಪೀಠದ ವಿಚಾರದಲ್ಲಿ ನ್ಯಾಯ ನೀಡುವ ಬದಲಿಗೆ ಓಟಿನ ರಾಜಕಾರಣ ಮಾಡಿದ ಪರಿಣಾಮ ಸಂಘರ್ಷ ಆರಂಭವಾಗಿದೆ. ದಾಖಲೆಗಳ ಪ್ರಕಾರ ದತ್ತಪೀಠ ಮತ್ತು ನಾಗೇನಹಳ್ಳಿ ದರ್ಗಾದ ವಿಚಾರಗಳು ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರಿಗೆ ತಿಳಿದಿದ್ದರೂ ಏಕೆ ಮೌನವಾಗಿದ್ದಾರೆ ಎಂದು ಪ್ರಶ್ನಿಸಿದರು.
ಚಿಕ್ಕಮಗಳೂರಿಗೆ ಇತ್ತೀಚೆಗೆ ಬಂದಿದ್ದ ಸಿಎಂ ಸಿದ್ದರಾಮಯ್ಯ ಅವರು, ಶಾಸಕ ಸಿ.ಟಿ.ರವಿ ಕೋಮುಸಾಮರಸ್ಯ ಹಾಳು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ ರಾಜಕೀಯ ವಿರೋಧವಿದ್ದರೂ ದ್ವೇಷದ ರಾಜಕಾರಣ ಮಾಡಿಲ್ಲ, ನಮ್ಮ ಪಕ್ಷ ಅಧಿಕಾರದಲ್ಲಿದ್ದ ಸಂದರ್ಭದಲ್ಲಿಯೂ ಸೇಡು ತೀರಿಸಿಲ್ಲ. ಸಾಮಾಜಿಕ ನ್ಯಾಯ ನೀಡಿದ್ದೇನೆ ಎಂದ ಅವರು, ಮೂರು ಬಾರಿ ಗೆದ್ದಾಗಲು ಜನರಿಗೆ ದ್ರೋಹ ಬಗೆದಿಲ್ಲ. ಕೆಟ್ಟ ಶಾಸಕ ಎಂಬ ಹೆಸರು ಗಳಿಸಿಕೊಳ್ಳದೆ ಜನರ ಶ್ರೇಯೋಭಿವೃದ್ಧಿಗಾಗಿ ಹೋರಾಟ ಮಾಡಿದ್ದೇನೆ. ಆದರೆ ಜನರ ನಡುವಿನ ಉತ್ತಮ ಸಾಮರಸ್ಯಕ್ಕೆ ಬೆಂಕಿ ಹಾಕಲಿಲ್ಲ. ಭಾರತ, ಕರ್ನಾಟಕ ಮಾತ್ರವಲ್ಲ ಚಿಕ್ಕಮಗಳೂರಿನಿಂದಲೂ ಕಾಂಗ್ರೆಸ್ ಮುಕ್ತಗೊಳಿಸುವುದೇ ನಮ್ಮ ಗುರಿ ಎಂದರು.
ಜಿಪಂ ಸದಸ್ಯ ರವೀಂದ್ರ ಬೆಳವಾಡಿ ಮಾತನಾಡಿ, ಜೆಡಿಎಸ್‍ನ ಮುಖಂಡರು ನಮ್ಮದೇ ಪಕ್ಷದ ಕಾರ್ಯಕರ್ತನನ್ನು ಈ ಬಾರಿಯ ಚುನಾವಣೆಯಲ್ಲಿ ಅಭ್ಯರ್ಥಿಯನ್ನಾಗಿಸಿ ಹರಕೆಯ ಕುರಿಯನ್ನಾಗಿ ಮಾಡಿದ್ದಾರೆ. ಇವರ ಷಡ್ಯಂತ್ರದಿಂದ ಅಭ್ಯರ್ಥಿ ಎಚ್ಚೆತ್ತುಕೊಳ್ಳಬೇಕು ಎಂದ ಅವರು, ಕಾಂಗ್ರೆಸ್ ಮತ್ತು ಜೆಡಿಎಸ್‍ನವರಿಗೆ ತಾಕತ್ತಿದ್ದರೆ ನಮ್ಮ ರೀತಿಯ ಪಾದಯಾತ್ರೆ ಮಾಡಿ ಎಂದರು.
ನಗರಸಭೆ ಸದಸ್ಯ ಎಚ್.ಡಿ.ತಮ್ಮಯ್ಯ, ಜಿಪಂ ಮಾಜಿ ಸದಸ್ಯ ಕಲ್ಮರುಡಪ್ಪ ಮಾತನಾಡಿದರು. ಮಂಗಳವಾರ ಚಿಕ್ಕಮಗಳೂರು ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮಗಳಿಂದ ಪಾದಯಾತ್ರೆ ಆರಂಭಿಸಿದ್ದ ಬಿಜೆಪಿ ಮುಖಂಡರು ಬುಧವಾರ ಸಂಜೆ ನಗರದ ಹನುಮಂತಪ್ಪ ಸರ್ಕಲ್‍ನಲ್ಲಿ ಜಮಾವಣೆಗೊಂಡು ಅಲ್ಲಿಂದ ವಿಜಯಪುರದಲ್ಲಿ ಬಹಿರಂಗ ಸಭೆ ನಡೆಸಿದರು. ವೇದಿಕೆಯಲ್ಲಿ ಜಿಪಂ ಸದಸ್ಯರಾದ ಕವಿತಾ ಲಿಂಗರಾಜು, ಜಸಂತಾ ಅನಿಲ್‍ಕುಮಾರ್, ಸೋಮಶೇಖರ್, ಹಿರಿಗಯ್ಯ, ಬಿಜೆಪಿ ನಗರಾಧ್ಯಕ್ಷ ಕೋಟೆ ರಂಗನಾಥ್, ಮುಖಂಡರಾದ ಸಿ.ಎಚ್.ಲೋಕೇಶ್, ರಾಜಪ್ಪ ಮತ್ತಿತರರು ಉಪಸ್ಥಿತರಿದ್ದರು.
ಇತ್ತೀಚೆಗೆ ಚಿಕ್ಕಮಗಳೂರಿಗೆ ಬಂದ ಕಾಂಗ್ರೆಸ್‍ನ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಸಂಕಷ್ಟದಲ್ಲಿದ್ದಾಗ ಕೈಹಿಡಿದ ಚಿಕ್ಕಮಗಳೂರಿನ ಜನತೆಯನ್ನು ನೆನಪು ಮಾಡಿಕೊಂಡರು. ಆದರೆ ದೇಶದಲ್ಲಿ ಯುಪಿಎ ಸರಕಾರವಿದ್ದಾಗ ಚಿಕ್ಕಮಗಳೂರಿನ ನೆನಪಾಗಲಿಲ್ಲ. ಗೆದ್ದುಹೋದ ಇಂದಿರಾಗಾಂಧಿ ಪ್ರಧಾನಿಯಾದರು. ಜಿಲ್ಲೆಗೆ ಏನು ಕೊಡುಗೆ ನೀಡಿದ್ದಾರೆ ಎಂದು ಪ್ರಶ್ನಿಸಿದ ಸಿ.ಟಿ.ರವಿ, ಕಳೆದ ಐದು ವರ್ಷಗಳಿಂದ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲೆಗೆ ಯಾವುದೇ ಕೊಡುಗೆ ನೀಡದೆ ಜಿಲ್ಲೆಯ ಜನರಲ್ಲಿ ಯಾವ ಮುಖವಿಟ್ಟುಕೊಂಡು ಮತ ಕೇಳುತ್ತಾರೆ. ಮಾಡಿರುವ ಕೆಲಸಗಳ ಬಗ್ಗೆ ವಿರೋಧ ಪಕ್ಷಗಳು ಆಕ್ಷೇಪಿಸುತ್ತಿವೆ. ಏನು ಅಭಿವೃದ್ಧಿ ಮಾಡಿದ್ದೇನೆ ಎಂದು ರಿಪೋರ್ಟ್ ಕಾರ್ಡ್ ಮೂಲಕ ಮಾಹಿತಿಯನ್ನು ಮನೆಮನೆಗೆ ತಲುಪಿಸುತ್ತೇನೆ ಎಂದರು.







