ಬೆಸ್ತ ಸಮುದಾಯಕ್ಕೆ ಶೇ.90ರಷ್ಟು ಮೀನುಗಾರಿಕೆ ನೀಡಿರುವ ವಿಚಾರ: ಸರಕಾರದ ತಿದ್ದುಪಡಿಗೆ ಹೈಕೋರ್ಟ್ ಮಧ್ಯಂತರ ತಡೆ

ಬೆಂಗಳೂರು, ಮಾ.28: ಬೆಸ್ತ ಸಮುದಾಯಕ್ಕೆ ಶೇ.90ರಷ್ಟು ಮೀನುಗಾರಿಕೆ ನೀಡಲು ಸರಕಾರ ಮಾಡಿದ್ದ ತಿದ್ದುಪಡಿಗೆ ಹೈಕೋರ್ಟ್ ಬುಧವಾರ ಮಧ್ಯಂತರ ಆದೇಶ ನೀಡಿದೆ.
ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ಮೀನು ಉತ್ಪಾದಕರ ಮತ್ತು ಮಾರಾಟಗಾರರ ಸಹಕಾರ ಸಂಘ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರಿದ್ದ ಏಕಸದಸ್ಯ ಪೀಠ, ಸರಕಾರಕ್ಕೆ ಹಾಗೂ ಇನ್ನಿತರ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ ಈ ಆದೇಶ ನೀಡಿದೆ.
ಸರಕಾರ 2018ರ ಫೆ.6ರಂದು ಮೀನುಗಾರಿಕೆ ಹಕ್ಕು ಮಾರ್ಗಸೂಚಿ ನಿಯಮಗಳಿಗೆ ತಿದ್ದುಪಡಿ ಮಾಡಿದ್ದ ಆದೇಶಕ್ಕೆ ಮುಂದಿನ ಆದೇಶದವರೆಗೆ ನ್ಯಾಯಾಲಯ ತಡೆ ನೀಡಿತು.
ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಶ್ರೀನಿವಾಸ್ ಅವರು, 2006ರಲ್ಲಿ ಸರಕಾರ ಮೀನುಗಾರಿಕೆ ಹಕ್ಕು ಕುರಿತಂತೆ ಹೊರಡಿಸಿದ್ದ ಮಾರ್ಗಸೂಚಿ ಪ್ರಕಾರ ಒಳನಾಡು ಮತ್ತು ಮೀನುಗಾರಿಕೆ ಇಲಾಖೆಯಡಿ ಬರುವ ಕೆರೆ, ಜಲಾಶಯ, ಕಟ್ಟೆ, ಹೊಂಡ ಮತ್ತಿತರ ಕಡೆ ಮೀನುಗಾರಿಕೆ ಹಕ್ಕುಗಳನ್ನು ಮೊದಲು ಸ್ಥಳೀಯ ಮೀನುಗಾರರ ಸೊಸೈಟಿಗೆ, ಅದು ಇಲ್ಲದಿದ್ದರೆ ಹೋಬಳಿ ಮಟ್ಟದ ಸೊಸೈಟಿ, ಇಲ್ಲವೇ ತಾಲೂಕು ಮತ್ತು ಜಿಲ್ಲಾ ಮಟ್ಟದ ಸೊಸೈಟಿಗೆ ನೀಡಲು ಅವಕಾಶವಿತ್ತು ಎಂದು ಹೇಳಿದರು.
ಆದರೆ ಸರಕಾರ ಮೀನುಗಾರಿಕಾ ಸಚಿವರ ಪ್ರಭಾವದ ಮೇರೆಗೆ ಹಾಗೂ ಕೆಲವು ಶಾಸಕರ ಮನವಿ ಮೇರೆಗೆ ಮುಖ್ಯಮಂತ್ರಿಗಳ ಸೂಚನೆಯಂತೆ ಮಾರ್ಗಸೂಚಿ ನಿಯಮಕ್ಕೆ ತಿದ್ದುಪಡಿ ಮಾಡಿ, ಶೇ.90ರಷ್ಟು ಮೀನುಗಾರಿಕೆ ಹಕ್ಕುಗಳನ್ನು ಬೆಸ್ತರಿಗೆ ನೀಡಬೇಕು ಎಂದು ಆದೇಶಿಸಲಾಗಿದೆ. ಇದರಿಂದಾಗಿ ಈಗಾಗಲೇ ಮೀನುಗಾರಿಕೆ ಸೊಸೈಟಿಗಳಲ್ಲಿ ಇರುವ ಪರಿಶಿಷ್ಟ ಜಾತಿ, ಪಂಗಡ, ಕ್ರೈಸ್ತ, ತಿಗಳರು, ಮುಸ್ಲಿಮರು ಮತ್ತು ಇತರೆ ಹಿಂದುಳಿದ ವರ್ಗದವರಿಗೆ ಅನ್ಯಾಯವಾಗಲಿದೆ ಎಂದು ಅವರು ನ್ಯಾಯಪೀಠಕ್ಕೆ ತಿಳಿಸಿದರು.







