ಮೆಸ್ಕಾಂ ಅಧಿಕಾರಿ ನಾಪತ್ತೆ: ಪ್ರಕರಣ ದಾಖಲು
ಬಂಟ್ವಾಳ, ಮಾ. 28: ರಾಯಚೂರು ವಿಭಾಗದಿಂದ ವಿಟ್ಲಕ್ಕೆ ವರ್ಗಾವಣೆಯಾಗಿ ಬಂದ ಮೆಸ್ಕಾಂ ಅಧಿಕಾರಿಯೊಬ್ಬರು ನಾಪತ್ತೆಯಾಗಿರುವ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಿಪಟೂರು ಮೂಲದ ಅಸಿಸ್ಟೆಂಟ್ ಇಂಜಿನಿಯರ್ ಕಾರ್ತಿಕ್ ನಾಪತ್ತೆಯಾದ ಮೆಸ್ಕಾಂ ಅಧಿಕಾರಿ ಎಂದು ತಿಳಿದುಬಂದಿದೆ. ವಿಟ್ಲ ಮೆಸ್ಕಾಂ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವಸಂತ್ ಅವರು ಪಾಣೆಮಂಗಳೂರು ಕಚೇರಿಗೆ ವರ್ಗಾವಣೆಯಾದ ಹಿನ್ನೆಲೆಯಲ್ಲಿ ರಾಯಚೂರು ಭಾಗದಿಂದ ವರ್ಗಾವಣೆಯಾಗಿ ಬಂದ ಕಾರ್ತಿಕ್ ಅವರು ಮಂಗಳವಾರ ಕರ್ತವ್ಯಕ್ಕೆ ಹಾಜರಾಗಿದ್ದರು. ಆದರೆ ಬುಧವಾರ ರಾಜೀನಾಮೆ ಪತ್ರವನ್ನು ಕಚೇರಿಯಲ್ಲಿಟ್ಟು, ನಾಪತ್ತೆಯಾಗಿದ್ದಾರೆ. ಅಲ್ಲದೇ ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ವಿಟ್ಲ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ದೂರಿನ ಮೇರೆಗೆ ವಿಟ್ಲ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಲಾಗಿದೆ.
ಈ ಹಿಂದೆ ವಿಟ್ಲದಲ್ಲಿ ಕರ್ತವ್ಯದಲ್ಲಿದ್ದ ವಸಂತ ಅವರು ಹಲವು ವರ್ಷಗಳಿಂದ ವಿಟ್ಲ ಶಾಖೆಯಲ್ಲಿ ಉತ್ತಮ ಕೆಲಸ ಮಾಡುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದರು. ಇದೀಗ ಅವರ ಬೇರೆ ಶಾಖೆಗೆ ವರ್ಗಾವಣೆ ಮಾಡಲಾಗಿದೆ. ಹೊರ ಜಿಲ್ಲೆಯಿಂದ ಬಂದ ಅಧಿಕಾರಿಗೆ ಒಂದೇ ದಿನಕ್ಕೆ ವಿಟ್ಲ ಭಾಗದ ಕೆಲಸದ ಒತ್ತಡ ಹೆಚ್ಚಾಗಿ ನಾಪತ್ತೆಯಾಗಲು ಕಾರಣವಾಗಿರಬಹುದೆಂದು ಸಾರ್ವಜನಿಕರು ಶಂಕೆ ವ್ಯಕ್ತಪಡಿಸಿದ್ದಾರೆ.





