ಮಹಾತ್ಮಾ ಗಾಂಧಿ ಹತ್ಯೆ : ಮರು ತನಿಖೆ ಮನವಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

ಹೊಸದಿಲ್ಲಿ, ಮಾ. 28: 60 ವರ್ಷಗಳ ಹಿಂದೆ ನಡೆದ ಮಹಾತ್ಮಾ ಗಾಂಧಿ ಹತ್ಯೆಯ ಮರು ತನಿಖೆ ನಡೆಸುವಂತೆ ಕೋರಿ ಸಲ್ಲಿಸಲಾದ ಮನವಿಯನ್ನು ಸುಪ್ರಿಂ ಕೋರ್ಟ್ ಬುಧವಾರ ತಿರಸ್ಕರಿಸಿದೆ. ಸ್ವತಂತ್ರ ಭಾರತದ ಅತಿ ದೊಡ್ಡ ಹತ್ಯೆಯ ತನಿಖೆ ಹಾಗೂ ವಿಚಾರಣೆ ಪಾರದರ್ಶಕವಾಗಿ ನಡೆದಿಲ್ಲ ಎಂದು ಮುಂಬೈ ಮೂಲದ ಎಂಜಿನಿಯರ್ ಪಂಕಜ್ ಕುಮುದ್ಚಂದ್ರ ಫಡ್ನಿಸ್ ಪ್ರತಿಪಾದಿಸಿದ್ದಾರೆ.
1948 ಜನವರಿ 30ರಂದು ಹೊಸದಿಲ್ಲಿಯಲ್ಲಿ ಸಂಜೆಯ ಪ್ರಾರ್ಥನಾ ಸಭೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ಮಹತ್ಮಾ ಗಾಂಧಿ ಅವರ ಮೇಲೆ ಬಲಪಂಥೀಯ ತೀವ್ರವಾದಿ ನಾಥೂರಾಮ್ ಗೋಡ್ಸೆ ಗುಂಡು ಹಾರಿಸಿ ಹತ್ಯೆಗೈದಿದ್ದ. ಬಲಪಂಥೀಯ ಕೇಸರಿ ಸಂಘಟನೆ ಅಭಿನವ್ ಭಾರತ್ನ ಮುಂಬೈ ಘಟಕದ ಟ್ರಸ್ಟಿ ಫಡ್ನಿಸ್ ತನ್ನ ಮನವಿಯಲ್ಲಿ, ‘‘ಗಾಂಧಿ ಹತ್ಯೆಯಲ್ಲಿ ಇನ್ನೋರ್ವ ಕೊಲೆಗಾರ ಭಾಗಿಯಾಗಿದ್ದಾನೆ’’ ಎಂದು ಸಂದೇಹ ವ್ಯಕ್ತಪಡಿಸಿದ್ದಾರೆ. ಮೂರರ ಬದಲಾಗಿ ನಾಲ್ಕು ಗನ್ ಶಾಟ್ಗಳಿಂದ ಗಾಂಧೀಜಿ ಅವರು ಹತ್ಯೆಗೀಡಾಗಿದ್ದಾರೆ. ಹತ್ಯೆಯ ಹಿಂದೆ ಇರುವ ನಿಜವಾದ ವ್ಯಕ್ತಿಯನ್ನು ನಿರ್ಧರಿಸುವಲ್ಲಿ ಕೆಳ ನ್ಯಾಯಾಲಯ ದೃಢ ಪುರಾವೆಯನ್ನು ನಿರ್ಲಕ್ಷಿಸಿದೆ ಎಂದು ಅವರು ಪ್ರತಿಪಾದಿಸಿದ್ದಾರೆ. ಈ ಪ್ರಕರಣದ ವಿಚಾರಣೆಯಲ್ಲಿ ನೆರವು ನೀಡುತ್ತಿರುವ ಹಿರಿಯ ನ್ಯಾಯವಾದಿ ಅಮರೇಂದ್ರ ಶರಣ್, ಗೋಡ್ಸೆಗೆ ಹೊರತಾಗಿ ಬೇರೆಯವರು ಗಾಂಧಿ ಅವರ ಹತ್ಯೆ ನಡೆಸಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ. ಆದುದರಿಂದ ಈ ಹತ್ಯೆಯ ಮರು ತನಿಖೆ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ಗೆ ತಿಳಿಸಿದರು.





