ಯೆನೆಪೊಯ ಪೌಂಡೇಶನ್ ವತಿಯಿಂದ ವಿದ್ಯಾರ್ಥಿಗಳಿಗೆ, ಶಿಕ್ಷಣ ಸಂಸ್ಥೆಗಳಿಗೆ ಶೈಕ್ಷಣಿಕ ಪ್ರತಿಭಾ ಪುರಸ್ಕಾರ

ಕೊಣಾಜೆ, ಮಾ. 28: ಯೆನೆಪೊಯ ಮೊಯ್ದಿನ್ ಕುಂಞಿ ಮೆಮೋರಿಯಲ್ ಎಜ್ಯುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್‌ನ ಘಟಕವಾದ ಯೆನೆಪೊಯ ಫೌಂಡೇಶನ್ ಹಾಗೂ ಯೆನೆಪೊಯ ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ಎಸ್‌ಎಸ್‌ಎಲ್‌ಸಿ, ಪಿಯುಸಿ ಹಾಗೂ ಸ್ನಾತಕ ಪದವಿ ಮಟ್ಟದಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದ ಹಾಗೂ ಶೇಖಡಾ ನೂರು ಫಲಿತಾಂಶ ದಾಖಲಿಸಿದ ಶಿಕ್ಷಣ ಸಂಸ್ಥೆಗಳಿಗೆ ಶೈಕ್ಷಣಿಕ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಬುಧವಾರ ಯೆನೆಪೊಯ ವಿವಿಯ ಯೆನ್ಡ್ಯೂರೆನ್ಸ್ ಝೋನ್ ಸಭಾಂಗಣದಲ್ಲಿ ನಡೆಯಿತು.
ಶೈಕ್ಷಣಿಕ ಪ್ರತಿಭಾ ಪುರಸ್ಕಾರವನ್ನು ವಿತರಿಸಿ, ಮಾತನಾಡಿದ ಜೈಪುರದ ರಾಜಾಸ್ಥಾನ್ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಎನ್.ಎ.ಎಸ್.ಐ-ಐ.ಸಿ.ಎಮ್.ಆರ್ ವಿಭಾಗದ ಮುಖ್ಯಸ್ಥರಾದ ಡಾ.ವಿಶ್ವಮೋಹನ್ ಕಠೋಜ್ ಅವರು, ಮಕ್ಕಳಲ್ಲಿ ಎಳವೆಯಲ್ಲಿಯೇ ಚಿಗುರೊಡೆಯುವ ಪ್ರತಿಭೆಗಳನ್ನು ಗುರುತಿಸಿ ಅವುಗಳಿಗೆ ಪೋಷಕರು ಪ್ರೋತ್ಸಾಹ ನೀಡಿದರೆ ಉತ್ತಮ ಮೌಲ್ಯಗಳೊಂದಿಗೆ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಇಂದಿನ ಜಾಗತಿಕ ಸ್ಮರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಕೂಡಾ ಶಿಕ್ಷಣ ಕ್ಷೇತ್ರದಲ್ಲಿ ಸತತ ಪರಿಶ್ರಮದೊಂದಿಗೆ ಮುನ್ನಡೆದು ಜ್ಞಾನ ಕೌಶಲವನ್ನು ಬೆಳೆಸುವುದರೊಂದಿಗೆ ಉತ್ತಮ ಸಮಾಜ ನಿರ್ಮಾಣಕ್ಕೆ ಪಣ ತೊಡಬೇಕು ಎಂದರು.
ಯೆನೆಪೊಯದಂತಹ ಶಿಕ್ಷಣ ಸಂಸ್ಥೆಗಳು ಇಂದು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರೋತ್ಸಾಹ ನೀಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದ್ದು ಇಂತಹ ಕಾರ್ಯ ಶ್ಲಾಘನೀಯವಾಗಿದೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ, ಮಾತನಾಡಿದ ಯೆನೆಪೊಯ ಸಮೂಹದ ಅಧ್ಯಕ್ಷರಾದ ಯೆನೆಪೊಯ ಮುಹಮ್ಮದ್ ಕುಂಞಿ ಅವರು, ಕಳೆದ ಹಲವು ವರ್ಷದಿಂದ ಯೆನೆಪೊಯ ಮೊಯ್ದಿನ್ ಕುಂಞಿ ಎಜ್ಯುಕೇಶನ್ ಹಾಗೂ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶೈಕ್ಷಣಿಕ ಸಾಧನೆಗೈದ ವಿದ್ಯಾರ್ಥಿಗಳನ್ನು ಹಾಗೂ ಶಿಕ್ಷಣ ಸಂಸ್ಥೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ಈ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿಯನ್ನು ಆಹ್ವಾನಿಸಿದಾಗ ಸುಮಾರು 4400 ಅರ್ಜಿಗಳು ಬಂದಿದ್ದವು. ಅದರಲ್ಲಿ ಸುಮಾರು 392 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿ ಶೈಕ್ಷಣಿಕ ಪ್ರೋತ್ಸಾಹವನ್ನು ನೀಡಲಾಗಿದೆ. ಈ ಶೈಕ್ಷಣಿಕ ಪ್ರತಿಭಾ ಪುರಸ್ಕಾರ ಯೋಜನೆಯಿಂದ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಅನುಕೂಲವನ್ನು ಕಲ್ಪಿಸಿಕೊಟ್ಟಿದೆ ಅಲ್ಲದೆ ಶೈಕ್ಷಣಿಕವಾಗಿ ಅವರನ್ನು ಮತ್ತಷ್ಟು ಪ್ರೋತ್ಸಾಹಿಸುವುದು ಕೂಡಾ ಉದ್ದೇಶವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಯೆನೆಪೊಯ ಮೊಯ್ದಿನ್ ಕುಂಞಿ ಮೆಮೋರಿಯಲ್ ಎಜ್ಯುಕೇಶನ್‌ನ ಅಧ್ಯಕ್ಷರಾದ ವೈ.ಮಹಮ್ಮದ್ ಕುಂಞಿ, ಯೆನಪೋಯ ವಿವಿ ಉಪಕುಲಪತಿ ಡಾ.ಎಂ.ವಿಜಯ ಕುಮಾರ್, ಐಎಇ ಟ್ರಸ್ಟೀ ಡಾ.ಸಿ.ಪಿ.ಹಬೀಬ್ ರೆಹಮಾನ್, ಕೆ.ಖಾಲಿದ್ ಬಾವ, ಕುಲಸಚಿವ ಶ್ರೀಕುಮಾರ್ ಮೆನನ್, ಅಬ್ದುಲ್ಲಾ ಜಾವೇದ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ ಹಾಗೂ ಸ್ನಾತಕ ಪದವಿ ಮಟ್ಟದಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದು ಸಾಧನೆಗೈದ ವಿವಿಧ ಶಿಕ್ಷಣ ಸಂಸ್ಥೆಗಳ ಸುಮಾರು 392 ವಿದ್ಯಾರ್ಥಿಗಳಿಗೆ ಹಾಗೂ ನೂರು ಶೇಖಡ ಫಲಿತಾಂಶ ದಾಖಲಿಸಿದ ಐದು ಶಿಕ್ಷಣ ಸಂಸ್ಥೆಗಳಿಗೆ ಈ ಸಂದರ್ಭದಲ್ಲಿ ಶೈಕ್ಷಣಿಕ ಪ್ರತಿಭಾ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು. ಪ್ರಶಸ್ತಿಯು ವಿವಿಧ ಶೈಕ್ಷಣಿಕ ವಿಭಾಗಕ್ಕೆ ಸಂಬಂಧಿಸಿದಂತೆ ರೂ.3000 ದಿಂದ 10,000ದವರಗೆ ನಗದು ಹಾಗೂ ಪ್ರಶಸ್ತಿ ಪತ್ರಗಳನ್ನೊಳಗೊಂಡಿದೆ.







