ನ್ಯೂಯಾರ್ಕ್ ವಿಮಾನ ನಿಲ್ದಾಣದಲ್ಲಿ ಪಾಕ್ ಪ್ರಧಾನಿಯ ದೈಹಿಕ ತಪಾಸಣೆ!

ವಾಶಿಂಗ್ಟನ್, ಮಾ. 28: ಪಾಕಿಸ್ತಾನದ ಪ್ರಧಾನಿ ಶಾಹಿದ್ ಖಾಕನ್ ಅಬ್ಬಾಸಿಯನ್ನು ನ್ಯೂಯಾರ್ಕ್‌ನ ಜಾನ್ ಎಫ್. ಕೆನಡಿ ವಿಮಾನ ನಿಲ್ದಾಣದ ಭದ್ರತಾ ವಿಭಾಗದಲ್ಲಿ ದೈಹಿಕ ತಪಾಸಣೆಗೆ ಒಳಪಡಿಸಿರುವ ಘಟನೆ ವರದಿಯಾಗಿದೆ.
ಪರಮಾಣು ಶಕ್ತ ದೇಶವೊಂದರ ಪ್ರಧಾನಿಯ ಮೈದಡವಿ ತಪಾಸಣೆ ನಡೆಸುವುದನ್ನು ತೋರಿಸುವ ವೀಡಿಯೊವನ್ನು ಯೂಟ್ಯೂಬ್‌ಗೆ ಹಾಕಲಾಗಿದೆ.
ಅಮೆರಿಕದಲ್ಲಿರುವ ತನ್ನ ಕಾಯಿಲೆಪೀಡಿತ ಸಹೋದರಿಯನ್ನು ನೋಡುವುದಕ್ಕಾಗಿ ಪಾಕ್ ಪ್ರಧಾನಿ ಅಮೆರಿಕಕ್ಕೆ ಖಾಸಗಿ ಭೇಟಿ ನೀಡಿದ್ದರು ಎನ್ನಲಾಗಿದೆ. ಭದ್ರತಾ ತಪಾಸಣೆ ವಿಭಾಗದಿಂದ ಜಾಕೆಟ್ ಮತ್ತು ಟ್ರಾಲಿ ಬ್ಯಾಗ್‌ನೊಂದಿಗೆ, ತನ್ನ ಟಿ-ಶರ್ಟ್ ಸರಿಪಡಿಸಿಕೊಳ್ಳುತ್ತಾ ಶಾಹಿದ್ ಖಾಕನ್ ಹೊರಬರುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದಾಗಿದೆ.
ಆದರೆ, ಅಬ್ಬಾಸಿ ನಿಯಮಿತವಾಗಿ ವಿದೇಶಗಳಿಗೆ ಖಾಸಗಿ ಭೇಟಿ ನೀಡುವ ಹವ್ಯಾಸ ಹೊಂದಿದ್ದಾರೆ ಎಂದು ‘ಜಿಯೋ ನ್ಯೂಸ್’ ವರದಿ ಮಾಡಿದೆ. ಇದಕ್ಕೂ ಮೊದಲು, ಬ್ರಿಟನ್ ಭೇಟಿಯ ಸಂದರ್ಭದಲ್ಲಿ ರೈಲು ನಿಲ್ದಾಣವೊಂದರಲ್ಲಿ ಒಂಟಿಯಾಗಿ ಅವರು ಪ್ರಯಾಣಿಸಿರುವುದು ವರದಿಯಾಗಿತ್ತು.
ಹಳಸುತ್ತಿರುವ ಸಂಬಂಧ
ಇತ್ತೀಚಿನ ದಿನಗಳಲ್ಲಿ ಅಮೆರಿಕ ಮತ್ತು ಪಾಕಿಸ್ತಾನಗಳ ಸಂಬಂಧ ಹಳಸುತ್ತಾ ಬಂದಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಮಹತ್ವ ಪಡೆದುಕೊಂಡಿದೆ.
‘‘ಅಮೆರಿಕವು ಪಾಕಿಸ್ತಾನಕ್ಕೆ ಕಳೆದ 15 ವರ್ಷಗಳಲ್ಲಿ 33 ಬಿಲಿಯ ಡಾಲರ್‌ಗೂ ಅಧಿಕ ಹಣವನ್ನು ಮೂರ್ಖತನದಿಂದ ಕೊಟ್ಟಿದೆ. ಅದಕ್ಕೆ ಪ್ರತಿಯಾಗಿ ಅವರು ನಮಗೆ ಸುಳ್ಳು ಮತ್ತು ವಂಚನೆಗಳನ್ನೇ ಕೊಟ್ಟರು. ನಮ್ಮ ನಾಯಕರನ್ನು ಮೂರ್ಖರು ಎಂಬುದಾಗಿ ಅವರು ಭಾವಿಸಿದರು. ಅಫ್ಘಾನಿಸ್ತಾನದಲ್ಲಿ ನಾವು ಬೇಟೆಯಾಡುವ ಭಯೋತ್ಪಾದಕರಿಗೆ ಅವರು ಸುರಕ್ಷಿತ ಆಶ್ರಯ ತಾಣಗಳನ್ನು ನೀಡುತ್ತಾ ಬಂದರು’’ ಎಂಬುದಾಗಿ ಇತ್ತೀಚೆಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖಾರವಾಗಿ ಟ್ವೀಟ್ ಮಾಡಿರುವುದನ್ನು ಸ್ಮರಿಸಬಹುದಾಗಿದೆ.







