ರಾಜ್ಯ ಸರ್ಕಾರ ವಿವಿಧ ಭಾಗ್ಯಗಳ ಮೂಲಕ ರಾಜ್ಯದ ಖಜಾನೆ ಖಾಲಿ ಮಾಡಿದೆ: ಶಾಸಕ ಎಚ್.ಎಸ್. ಶಿವಶಂಕರ್

ದಾವಣಗೆರೆ,ಮಾ.28: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ವಿವಿಧ ಭಾಗ್ಯಗಳ ಸರಮಾಲೆಗಳ ಮೂಲಕ ರಾಜ್ಯದ ಖಜಾನೆ ಖಾಲಿ ಮಾಡಿ ವೃಧ್ಯಾಪ್ಯ, ವಿಧವಾ ವೇತನಕ್ಕೂ ಹಣ ಇಲ್ಲದಂತೆ ಮಾಡಿದೆ ಎಂದು ಜೆಡಿಎಸ್‍ನ ಹರಿಹರ ಶಾಸಕ ಎಚ್.ಎಸ್. ಶಿವಶಂಕರ್ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರಕ್ಕೆ ರೈತರ ಬಗ್ಗೆ ಕಿಂಚಿತ್ತೂ ಖಾಳಜಿ ಇಲ್ಲ. ಸಹಕಾರ ಸಂಘಗಳಲ್ಲಿ ಸಾಲ ಮಾಡಿದ್ದೇವೆಂದು ಬೀಗಿದ ಸಿಎಂ ಸಿದ್ದರಾಮಯ್ಯ ಇಂದಿಗೂ ಸಹಕಾರ ಬ್ಯಾಂಕ್‍ಗಳಿಗೆ ಹಣ ನೀಡಿಲ್ಲ. ಇದು ರೈತರ ಬಗ್ಗೆ ರಾಜ್ಯ ಸರ್ಕಾರಕ್ಕಿರುವ ಖಾಳಜಿ ತೋರಿಸುತ್ತದೆ ಎಂದ ಅವರು, ಅಧಿಕಾರಕ್ಕಾಗಿ ಕಾಂಗ್ರೆಸ್ ಸರ್ಕಾರ ಘೋಷಣೆಯನ್ನು ಮಾಡಿ ಪ್ರಚಾರ ಮಾಡುತ್ತಾರೆ. ಕೆಲಸ ಮಾಡದ, ಜನಹಿತ ಕಾಯದ ಪಕ್ಷ ಕಾಂಗ್ರೆಸ್‍ಗೆ ಪ್ರಚಾರವೇ ಸಾಧನೆಯಾಗಿದೆ ಎಂದು ಅವರು ಕಿಡಿಕಾರಿದರು.
ಕನ್ನಡಿಗರ ಪಕ್ಷ ಜೆಡಿಎಸ್. ಈ ಬಾರಿ ರಾಜ್ಯದ ಜನತೆ ಪಕ್ಷ ಸ್ಪಷ್ಟ ಬಹುಮತ ನೀಡಲಿದ್ದಾರೆ. ರಾಜ್ಯದಲ್ಲಿ ಕುಮಾರಸ್ವಾಮಿ ಸಿಎಂ ಆಗಿದ್ದಾಗ ಮನೆ ಬಾಗಿಲಿಗೆ ಆಡಳಿತ ತೆಗೆದುಕೊಂಡಿದ್ದರು. ನಮ್ಮ ಸರ್ಕಾರ ದೂರು ಇದ್ದಲ್ಲೇ ದೊರೆ ಎಂಬಂತಿತ್ತು. ಆದರೆ, ಇಂದಿನ ಸರ್ಕಾರ ದೊರೆ ಇದ್ದಲ್ಲಿಗೆ ಜನರು ದೂರು ತೆಗೆದುಕೊಂಡು ಹೋಗಬೇಕಾದ ದುಸ್ಥಿತಿ ಬಂದಿದೆ ಎಂದು ಅವರು ತಿಳಿಸಿದರು.
ಮಾಜಿ ಸಿಎಂ ಕುಮಾರಸ್ವಾಮಿ ಈಗಾಗಲೇ ರಾಜ್ಯಾದ್ಯಂತ ಯಶಸ್ವಿ ವಿಕಾಸ ಪರ್ವ ಯಾತ್ರೆ ನಡೆಸಿದ್ದಾರೆ. ಎಲ್ಲಾ ಕಡೆಗಳಲ್ಲಿ ಜನರಿಂದ ಭಾರೀ ಬೆಂಬಲ ದೊರೆಯುತ್ತಿದೆ. ಈಗಾಗಲೇ ಕಾಂಗ್ರೆಸ್ ಹಾಗೂ ಬಿಜೆಪಿ ದೂರಾಡಳಿತ ನೋಡಿ ಬೇಸತ್ತಿದ್ದೀರಿ. ಬಿಜೆಪಿ ಭ್ರಷ್ಟ ಸರ್ಕಾರವಾದರೆ, ಕಾಂಗ್ರೆಸ್ ಲಜ್ಜೆಗೆಟ್ಟ ಸರ್ಕಾರವಾಗಿದೆ. ಇಂತಹ ಜನವಿರೋಧಿ ನೀತಿಯುಳ್ಳ ರಾಷ್ಟ್ರೀಯ ಪಕ್ಷಗಳನ್ನು ತ್ಯಜಿಸಿ ಪ್ರಾದೇಶಿಕ ಪಕ್ಷವಾದ ಜೆಡಿಎಸ್‍ಗೆ ಅಧಿಕಾರ ನೀಡಬೇಕು ಎಂದು ಅವರು ಮನವಿ ಮಾಡಿದರು.
ಜಿಲ್ಲೆಯಲ್ಲಿ 8 ಕ್ಷೇತ್ರಗಳಲ್ಲಿ 1 ಕ್ಷೇತ್ರವನ್ನು ಬಿಎಸ್‍ಪಿಗೆ ನೀಡಲು ವರಿಷ್ಠರು ನಿರ್ಧರಿಸಿದ್ದಾರೆ. ಹೊನ್ನಾಳಿ, ಹರಪನಹಳ್ಳಿ, ಜಗಳೂರು, ದಾವಣಗೆರೆ ಉತ್ತರ ಈ ನಾಲ್ಕರಲ್ಲಿ ಒಂದು ಕ್ಷೇತ್ರದಲ್ಲಿ ಬಿಎಸ್‍ಪಿ ಅಭ್ಯರ್ಥಿಗೆ ಟಿಕೇಟ್ ನೀಡಲಾಗುವುದು. ಜಿಲ್ಲೆಯಲ್ಲಿ ನಾಲ್ಕು ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲುವ ಭರವಸೆ ಇದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಸರ್ವೇಗಳು ಜನರನ್ನು ಗೊಂದಲಕ್ಕೆ ತಳ್ಳಿವೆ:
ಸರ್ವೇಗಳಿಂದ ರಾಜ್ಯದ ಜನತೆ ಗೊಂದಲದಲ್ಲಿದ್ದಾರೆ. ಸಮೀಕ್ಷೆಗಳು ಕೆಲ ಬಾರಿ ನಿಜವಾಗಿವೆ, ಕೆಲ ಬಾರಿ ಸುಳ್ಳಾಗಿವೆ. ಆದ್ದರಿಂದ ಸಮೀಕ್ಷೆಗಳ ಬಗ್ಗೆ ಯಾರು ತಲೆಕೆಡಿಸಿಕೊಳ್ಳಬೇಕಿಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಚಿದಾನಂದಪ್ಪ, ಕಡತಿ ಅಂಜಿನಪ್ಪ, ಗಣೇಶ್, ಮಂಜಪ್ಪ, ನಂಜಪ್ಪ ಮತ್ತಿತರರಿದ್ದರು.
31ಕ್ಕೆ ಕುಮಾರಸ್ವಾಮಿ ಆಗಮನ
ಮಾ. 31ರ ಶನಿವಾರದಂದು ಜಿಲ್ಲೆಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆಗಮಿಸಲಿದ್ದು, ಜಗಳೂರಿನಲ್ಲಿ ಬೆಳಗ್ಗೆ 11ಕ್ಕೆ ಏರ್ಪಡಿಸಿರುವ ವಿಕಾಸಪರ್ವ ಸ್ವಾಭಿಮಾನ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಇವರ ಜೊತೆ ನಾಯಕರಾದ ಪಿಜಿಆರ್ ಸಿಂಧ್ಯಾ, ಫಾರೂಕ್ ಸೇರಿದಂತೆ ರಾಜ್ಯಮಟ್ಟದ ನಾಯಕರು ಪಾಲ್ಗೊಳ್ಳುವರು. 1 ಗಂಟೆಗೆ ಮಾಯಕೊಂಡ ವಿಧಾನಸಭಾ ಕ್ಷೇತ್ರದ ಅಣಜಿಯಲ್ಲಿ ಸಮಾವೇಶ ನಡೆಯಲಿದೆ. 3.30ಕ್ಕೆ ಹರಿಹರಕ್ಕೆ ಆಗಮಿಸಲಿದ್ದು ಅಂದು 5 ಸಾವಿರ ಬೈಕ್‍ಗಳೊಂದಿಗೆ ಬೈಕ್ ರ್ಯಾಲಿ ನಡೆಯಲಿದೆ. ಉಕ್ಕಡಗಾತ್ರಿ, ನಂದಿಗುಡಿ ಮತ್ತಿತರ ಸ್ಥಳಗಳಿಗೆ ಭೇಟಿ ನೀಡುವರು ಎಂದು ಅವರು ಮಾಹಿತಿ ನೀಡಿದರು.







