ಶಾಲಾ ದಾಖಲಾತಿ ಅರ್ಜಿಯಲ್ಲಿ ಜಾತಿ, ಧರ್ಮ ಸೂಚಿಸದ 1.23 ಲಕ್ಷ ವಿದ್ಯಾರ್ಥಿಗಳು

ಹೊಸದಿಲ್ಲಿ, ಮಾ. 28: ಒಂದನೇ ತರಗತಿ ಹಾಗೂ 10ನೇ ತರಗತಿ ನಡುವಿನ 1,23,630 ವಿದ್ಯಾರ್ಥಿಗಳು ನಮಗೆ ಯಾವುದೇ ಜಾತಿ, ಧರ್ಮ ಇಲ್ಲ ಎಂದು ತಿಳಿಸಿದ್ದಾರೆ ಎಂದು ಬುಧವಾರ ಕೇರಳ ರಾಜ್ಯ ಶಿಕ್ಷಣ ಸಚಿವ ಸಿ. ರವೀಂದ್ರನಾಥ್ ವಿಧಾನ ಸಭೆಯಲ್ಲಿ ಬುಧವಾರ ಘೋಷಿಸಿದರು. ಶಾಲಾ ಪ್ರವೇಶದ ಅರ್ಜಿಯಲ್ಲಿ ಧರ್ಮ ಹಾಗೂ ಜಾತಿ ಸೂಚಿಸುವ ಕಾಲಂ ಅನ್ನು ತುಂಬಿಸದ ವಿದ್ಯಾರ್ಥಿಗಳ ಸಂಖ್ಯೆಗೆ ಸಂಬಂಧಿಸಿ ವಾಮನಪುರಂನ ಸಿಪಿಎಂ ಶಾಸಕ ಡಿ.ಕೆ. ಮುರಳಿ ಅವರ ಪ್ರಶ್ನೆಗೆ ಸಚಿವರು ಈ ಪ್ರತಿಕ್ರಿಯೆ ನೀಡಿದರು. ಹೈಯರ್ ಸೆಕೆಂಡರಿ ಶಾಲೆಗಳಲ್ಲಿ ಈ ಕಾಲಂ ಅನ್ನು ಹೆಚ್ಚಿನವರು ಭರ್ತಿಮಾಡಿದ್ದಾರೆ. 11 ಹಾಗೂ 12ನೇ ತರಗತಿಗಳ ಇಂತಹ ವಿದ್ಯಾರ್ಥಿಗಳ ಸಂಖ್ಯೆ ಕ್ರಮವಾಗಿ 278 ಹಾಗೂ 239.
ಆದಾಗ್ಯೂ, ಇದು ಸರಕಾರಿ ಶಾಲೆಗಳ ದತ್ತಾಂಶ ಮಾತ್ರವೇ ಅಥವಾ ಸಿಬಿಎಸ್‌ಇ ಹಾಗೂ ಐಸಿಎಸ್‌ಇ ಪಠ್ಯ ಕ್ರಮ ಹೊಂದಿದ ಇತರ ಶಾಲೆಗಳು ಕೂಡ ಸೇರಿವೆಯೇ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. 9209 ಶಾಲೆಗಳ ಶಾಲಾವಾರು ಪಟ್ಟಿಯನ್ನು ಕೂಡ ಲಗತ್ತಿಸಲಾಗಿದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
2011ನೆ ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ ಸುಮಾರು 13,000 ಶಾಲೆಗಳಿವೆ. 50 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ದಾಖಲು ಮಾಡಿಕೊಂಡಿದ್ದಾರೆ. ಶಾಲೆಯ ಪ್ರವೇಶ ಅರ್ಜಿಯಲ್ಲಿ ಜಾತಿ ಹಾಗೂ ಧರ್ಮದ ಕಾಲಂ ಅನ್ನು ತುಂಬಿಸದ ವಿದ್ಯಾರ್ಥಿಗಳ ಸಂಖ್ಯೆ ಶೇ. 2.
ಶಾಲೆ ದಾಖಲು ಸಂದರ್ಭ ತಮ್ಮ ಮಕ್ಕಳ ಜಾತಿ ಹಾಗೂ ಧರ್ಮ ದಾಖಲಿಸದೇ ಇರಲು ನಿರ್ಧರಿಸಿದ ಬಳಿಕ 2017 ಜೂನ್‌ನಲ್ಲಿ ಸಿಪಿಎಂ ಸಂಸದ ಎಂ.ಬಿ. ರಾಜೇಶ್ ಹಾಗೂ ಕಾಂಗ್ರೆಸ್ ಶಾಸಕ ವಿ.ಟಿ. ಬಲರಾಮ್ ಈ ಚರ್ಚೆ ಆರಂಭಿಸಿದ್ದರು.







