ಬಾಗೇಪಲ್ಲಿ: ನೀತಿ ಸಂಹಿತೆ ಜಾರಿಯಾದರೂ ತೆರವಾಗದ ಫ್ಲೆಕ್ಸ್ ಗಳು

ಬಾಗೇಪಲ್ಲಿ,ಮಾ.28: ನೀತಿ ಸಂಹಿತೆ ಜಾರಿಗೆ ಬಂದು 24 ಗಂಟೆ ಕಳೆದರೂ ಸಹ ಸಂಬಂಧಪಟ್ಟ ಅಧಿಕಾರಿಗಳು ಸರ್ಕಾರದ ಯೋಜನೆಗಳನ್ನು ಬಿಂಬಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾವಚಿತ್ರವಿರುವಂತಹ ಫ್ಲೆಕ್ಸ್ ಗಳನ್ನು ತೆರವುಗೊಳಿದೆ ನಿರ್ಲಕ್ಷ್ಯ ತೋರುವ ಮೂಲಕ ಚುನಾವಣಾ ಆಯೋಗದ ಆದೇಶವನ್ನು ಗಾಳಿಗೆ ತೂರಿರುವ ಘಟನೆ ಬಾಗೇಪಲ್ಲಿ ತಾಲೂಕಿನ ಕಸಬಾ ಹೋಬಳಿ ದೇವರಗುಡಿಪಲ್ಲಿ ಗ್ರಾಮದಲ್ಲಿ ನಡೆದಿದೆ.
2018ರ ವಿಧಾನ ಸಭಾ ಚುನಾವಣೆಯ ಹಿನ್ನಲೆಯಲ್ಲಿ ಚುನಾವಣೆಯ ದಿನಾಂಕ ನಿಗದಿ ಹಾಗೂ ಮಾದರಿ ನೀತಿ ಸಂಹಿತೆಯನ್ನು ಚುನಾವಣೆ ಆಯೋಗ ಮಂಗಳವಾರ 11 ಗಂಟೆಯಿಂದಲೇ ಜಾರಿಗೆ ಬರುವಂತೆ ಆದೇಶಿಸಿದೆ. ಮಾದರಿ ನೀತಿ ಸಂಹಿತೆ ಆದೇಶ ಜಾರಿಯಾಗುತ್ತಿದ್ದಂತೆ ಸರ್ಕಾರ, ರಾಜಕೀಯ ಪಕ್ಷ ಸೇರಿದಂತೆ ಸಂಘ ಸಂಸ್ಥೆಗಳಿಗೆ ಸಂಬಂಧಿಸಿರುವಂತಹ ಭಿತ್ತಿ ಪತ್ರ, ಫ್ಲೆಕ್ಸ್ ಗಳನ್ನು, ಪೋಸ್ಟರ್ ಗಳನ್ನು ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ತೆರವುಗೊಳಿಸಬೇಕು. ಒಂದು ವೇಳೆ ನೀತಿ ಸಂಹಿತೆಯನ್ನು ಪಾಲಿಸದೇ ಇದ್ದರೆ, ಅಧಿಕಾರಿಗಳ ವಿರುದ್ದ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕೇಂದ್ರ ಚುನಾವಣಾ ಆಯೋಗ ಆದೇಶಿಸಿದೆ.
ಆದರೆ ಕಾಂಗ್ರೆಸ್ ಸರ್ಕಾರದ ಕ್ಷೀರ ಧಾರೆ ಯೋಜನೆಗೆ ಸಂಬಂಧಿಸಿರುವ ಫ್ಲೆಕ್ಸ್ ಒಂದು ತಾಲೂಕಿನ ದೇವರಗುಡಿಪಲ್ಲಿ ಗ್ರಾ.ಪಂ ಕಚೇರಿಯ ಮುಂಭಾಗದಲ್ಲಿ ರಾರಾಜಿಸುತ್ತಿದ್ದರೂ ಸಹ ಗ್ರಾ.ಪಂ ಅಧಿಕಾರಿಗಳು ಇದುವರೆಗೂ ಕ್ರಮ ಕೈಗೊಂಡಿಲ್ಲ. ಚುನಾವಣಾ ಆಯೋಗದ ನೀತಿ ಸಂಹಿತೆ ಆದೇಶಕ್ಕೂ ನಮಗೂ ಯಾವುದೇ ಸಂಬಂದವೇ ಇಲ್ಲ ಎನ್ನುವಂತೆ ಗ್ರಾ.ಪಂ ಅಧಿಕಾರಿಗಳು ವರ್ತಿಸುವ ಮೂಲಕ ಚುನಾವಣಾ ಆಯೋಗದ ಅದೇಶವನ್ನು ಗಾಳಿಗೆ ತೂರಿದ್ದಾರೆ.





