ಪುತ್ತೂರು : ರಿಕ್ಷಾ ಚಾಲಕನಿಗೆ ಹಲ್ಲೆ-ದೂರು
ಪುತ್ತೂರು, ಮಾ. 28: ಬೈಕಿಗೆ ಸೈಡ್ ಕೊಡುವ ವಿಚಾರದಲ್ಲಿ ರಿಕ್ಷಾ ಚಾಲಕನೊಬ್ಬನನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿ ಬೆದರಿಕೆಯೊಡ್ಡಿರುವುದಾಗಿ ರಿಕ್ಷಾಚಾಲಕರೊಬ್ಬರು ಪೊಲೀಸರಿಗೆ ಘಟನೆ ಬುಧವಾರ ಪುತ್ತೂರು ನಗರದ ದರ್ಬೆ ಸಮೀಪ ನಡೆದಿದೆ.
ಪುತ್ತೂರು ತಾಲೂಕಿನ ಸವಣೂರು ನಿವಾಸಿ ರಾಜೇಶ್ (30) ಹಲ್ಲೆಗೊಳಗಾದ ರಿಕ್ಷಾ ಚಾಲಕ. ಹಲ್ಲೆಗೊಳಗಾದ ಅವರು ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಪುತ್ತೂರಿನ ಬಸ್ ನಿಲ್ದಾಣದ ಬಳಿಯ ರಿಕ್ಷಾ ಪಾರ್ಕಿಂಗ್ ಸ್ಥಳದಲ್ಲಿ ರಿಕ್ಷಾ ನಿಲ್ಲಿಸಿ ಬಾಡಿಗೆ ಮಾಡುತ್ತಿದ್ದ ರಾಜೇಶ್ ಅವರು ಬುಧವಾರ ಪುತ್ತೂರು ಬಸ್ ನಿಲ್ದಾಣದ ಬಳಿಯಿಂದ ದರ್ಬೆ ಕಡೆಗೆ ಇಬ್ಬರು ಮಹಿಳಾ ಪ್ರಯಾಣಿಕರನ್ನು ಕುಳ್ಳಿರಿಸಿಕೊಂಡು ತೆರಳುತ್ತಿದ್ದ ವೇಳೆ ಅರುಣಾ ಚಿತ್ರಮಂದಿರದ ಬಳಿ ಬೈಕಿನಲ್ಲಿ ಬಂದ ಕೆಮ್ಮಿಂಜೆ ಗ್ರಾಮದ ಕೂರ್ನಡ್ಕದ ಜಬ್ಬಾರ್ ಮತ್ತು ಇನ್ನೊಬ್ಬ ಬೈಕಿಗೆ ಸೈಡು ಕೊಟ್ಟಿಲ್ಲ ಎಂಬ ನೆಪದಲ್ಲಿ ಮಾತಿಗಿಳಿದು ಜಗಳವಾಡಿದ್ದರು. ಬಳಿಕ ತಮ್ಮ ಬೈಕಿನಲ್ಲಿ ರಿಕ್ಷಾವನ್ನು ಹಿಂಬಾಲಿಸಿಕೊಂಡು ಬಂದು ದರ್ಬೆ ಸಮೀಪ ತಡೆದು ನಿಲ್ಲಿಸಿ ಅವಾಚ್ಯ ಶಬ್ಧಗಳಿಂದ ಬೈದು ಕೈ ಮತ್ತು ಹೆಲ್ಮೆಟ್‌ನಿಂದ ಹೊಡೆದು ಹಲ್ಲೆ ನಡೆಸಿ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಪುತ್ತೂರು ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಜಬ್ಬಾರ್ ಎಂಬಾತನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.





