ದತ್ತಾಂಶ ಸೋರಿಕೆ: ಫೇಸ್‌ಬುಕ್‌ಗೆ ಸರಕಾರದ ನೋಟಿಸ್

ಹೊಸದಿಲ್ಲಿ,ಮಾ.28: ಬಳಕೆದಾರರ ದತ್ತಾಂಶ ಉಲ್ಲಂಘನೆಗೆ ಉತ್ತರ ಹಾಗೂ ವೈಯಕ್ತಿಕ ದತ್ತಾಂಶಗಳ ಸುರಕ್ಷತೆಗೆ ಮತ್ತು ದುರ್ಬಳಕೆ ತಡೆಗೆ ಅದು ಕೈಗೊಂಡಿರುವ ಕ್ರಮಗಳ ವಿವರಗಳನ್ನು ಕೇಳಿ ಸರಕಾರವು ಬುಧವಾರ ಫೇಸ್‌ಬುಕ್‌ಗೆ ನೋಟಿಸ್‌ನ್ನು ಹೊರಡಿಸಿದೆ.
ಫೇಸ್‌ಬುಕ್‌ನಿಂದ ದತ್ತಾಂಶಗಳ ಸೋರಿಕೆ ಮತ್ತು ನಿರ್ದಿಷ್ಟ ವಾಗಿ ಚುನಾವಣೆಗಳ ಮೇಲೆ ಪ್ರಭಾವ ಬೀರಲು ಈ ದತ್ತಾಂಶಗಳನ್ನು ಬಳಸಿಕೊಂಡಿರುವ ಪ್ರಶ್ನಾರ್ಹ ಪರಿಪಾಠಗಳ ಕುರಿತು ಮಾಧ್ಯಮಗಳಲ್ಲಿಯ ವರದಿಗಳಿಗೆ ಸಂಬಂಧಿಸಿದಂತೆ ವಿವರಗಳನ್ನು ಕೋರಿ ಬ್ರಿಟನ್‌ನ ಕೇಂಬ್ರಿಜ್ ಅನಲಿಟಿಕಾಕ್ಕೆ ಈಗಾಗಲೇ ನೋಟಿಸ್‌ನ್ನು ಕಳುಹಿಸಲಾಗಿದೆ ಎಂದು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಬುಧವಾರ ಹೇಳಿಕೆಯೊಂದರಲ್ಲಿ ತಿಳಿಸಿದೆ.
ದತ್ತಾಂಶ ಸೋರಿಕೆಯ ಬಗ್ಗೆ ಫೇಸ್‌ಬುಕ್‌ನಿಂದ ಇನ್ನಷ್ಟು ಮಾಹಿತಿಗಳನ್ನು ಪಡೆಯುವ ಅಗತ್ಯವಿದ್ದರಿಂದ ಸಚಿವಾಲಯವು ಬುಧವಾರ ಅದಕ್ಕೆ ನೋಟಿಸ್‌ನ್ನು ಹೊರಡಿಸಿದೆ ಎಂದು ಹೇಳಿಕೆಯು ತಿಳಿಸಿದೆ.
ಕೇಂಬ್ರಿಜ್ ಅನಲಿಟಿಕಾ ಅಥವಾ ಸಂಬಂಧಿತ ಸಂಸ್ಥೆಗಳು ಭಾರತೀಯ ಮತದಾರರು ಮತ್ತು ಬಳಕೆದಾರರ ವೈಯಕ್ತಿಕ ದತ್ತಾಂಶಗಳನ್ನು ಯಾವುದೇ ರೀತಿಯಲ್ಲಿ ಹೊಂದಾಣಿಕೆ ಮಾಡಿಕೊಂಡಿವೆಯೇ ಎನ್ನುವುದು ಸೇರಿದಂತೆ ಐದು ಪ್ರಶ್ನೆಗಳನ್ನು ಸಚಿವಾಲಯವು ತನ್ನ ಪತ್ರದಲ್ಲಿ ಎತ್ತಿದೆ.
ದತ್ತಾಂಶಗಳನ್ನು ಬಳಸಿಕೊಂಡು ಭಾರತೀಯ ಚುನಾವಣಾ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ನಡೆಸಲು ಫೇಸ್‌ಬುಕ್ ಅಥವಾ ಸಂಬಂಧಿತ ಏಜೆನ್ಸಿಗಳನ್ನು ಹಿಂದೆ ಯಾವುದಾದರೂ ಸಂಸ್ಥೆಯು ಗೊತ್ತು ಮಾಡಿಕೊಂಡಿತ್ತೇ ಎನ್ನುವ ಬಗ್ಗೆ ಉತ್ತರ ಸಲ್ಲಿಸುವಂತೆ ನೋಟಿಸ್‌ನಲ್ಲಿ ತಿಳಿಸಲಾಗಿದೆ.
ಸದ್ಯ ಅತ್ಯಂತ ಹೆಚ್ಚಿನ ಫೇಸ್‌ಬುಕ್ ಬಳಕೆದಾರರು ಭಾರತೀಯರಾಗಿದ್ದಾರೆ ಎಂದು ಬೆಟ್ಟು ಮಾಡಿರುವ ನೋಟಿಸ್, ಇಷ್ಟೊಂದು ದೊಡ್ಡ ಪ್ರಮಾಣದ ದತ್ತಾಂಶಗಳ ಸುರಕ್ಷತೆ ಮತ್ತು ಖಾಸಗಿತನವನ್ನು ರಕ್ಷಿಸಲು ಮತ್ತು ಯಾವುದೇ ಮೂರನೇ ಪಕ್ಷದಿಂದ ಅವುಗಳ ದುರ್ಬಳಕೆಯನ್ನು ತಡೆಯಲು ಕಂಪನಿಯು ಕೈಗೊಂಡಿರುವ ಪೂರ್ವನಿಯಾಮಕ ಕ್ರಮಗಳ ವಿವರಗಳನ್ನು ಸಲ್ಲಿಸುವಂತೆಯೂ ಸೂಚಿಸಿದೆ.
2018,ಎಪ್ರಿಲ್ 7ರೊಳಗೆ ಉತ್ತರಿಸುವಂತೆ ಫೇಸ್‌ಬುಕ್‌ಗೆ ತಿಳಿಸಲಾಗಿದೆ.







