ಕರ್ಣಾಟಕ ಬ್ಯಾಂಕ್‌ನಿಂದ ಇ-ಕಲಿಕಾ ವ್ಯವಸ್ಥೆ ಆರಂಭ

ಮಂಗಳೂರು, ಮಾ.28: ಸಿಬ್ಬಂದಿಗೆ ಅತ್ಯಾಧುನಿಕ ಬ್ಯಾಂಕಿಂಗ್ ಜ್ಞಾನವನ್ನು ವಿದ್ಯುನ್ಮಾನ ಮೂಲಗಳ ಮೂಲಕ ಔಪಚಾರಿಕ ರೀತಿಯಲ್ಲಿ ಸಮಾನ ವೇದಿಕೆಯಲ್ಲಿ ಒದಗಿಸುವ ಉದ್ದೇಶದಿಂದ ಕರ್ಣಾಟಕ ಬ್ಯಾಂಕ್ ಬುಧವಾರ ಇ-ಕಲಿಕಾ ವ್ಯವಸ್ಥೆಗೆ ಚಾಲನೆ ನೀಡಿತು.
ಬ್ಯಾಂಕ್‌ನ ವ್ಯವಸ್ಥಾಪನಾ ನಿರ್ದೇಶಕ ಮತ್ತು ಮುಖ್ಯ ಕಾರ್ಯಕಾರಿ ಅಧಿಕಾರಿ ಮಹಾಬಲೇಶ್ವರ ಎಂ.ಎಸ್ ಇ-ಲರ್ನಿಂಗ್ ವ್ಯವಸ್ಥೆಗೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಜ್ಞಾನಕ್ಕೆ ಮಿತಿಯೆಂಬುದಿಲ್ಲ ಮತ್ತು ಅನ್ವೇಷಣೆಯ ಜ್ಞಾನದ ದಿಗಂತಕ್ಕೆ ಕೊನೆಯೆಂಬುದಿಲ್ಲ. ಇ-ಕಲಿಕಾ ವ್ಯವಸ್ತೆಯು ಜನರನ್ನು ಕೌಶಲಯುಕ್ತಗೊಳಿಸಲು ಒಂದು ಉತ್ತಮ ವಿಧಾನವಾಗಿದೆ ಮತ್ತು ಅದು ತರಗತಿಗಳಲ್ಲಿ ಕಲಿಯುವಷ್ಟೇ ಪರಿಣಾಮಕಾರಿಯಾಗಿದೆ ಎಂದು ತಿಳಿಸಿದರು.
ಬ್ಯಾಂಕ್‌ನ ಎಲ್ಲ ಸಿಬ್ಬಂದಿ ತಾಂತ್ರಿಕವಾಗಿ ಶ್ರೀಮಂತವಾಗಿರುವ ಇ-ಲರ್ನಿಂಗ್ ವ್ಯವಸ್ಥೆಯ ಲಾಭ ಪಡೆಯುವಂತೆ ಅವರು ಕರೆ ನೀಡಿದರು.
ಮುಖ್ಯ ಪ್ರಧಾನ ವ್ಯವಸ್ಥಾಪಕ ರಾಘವೇಂದ್ರ ಭಟ್ ಎಂ., ಚಂದ್ರಶೇಖರ್ ರಾವ್ ಬಿ., ಸುಭಾಶ್ಚಂದ್ರ ಪುರಾಣಿಕ್, ಬಾಲಚಂದ್ರ ವೈ.ವಿ, ಮುರಳೀಧರ ಕೃಷ್ಣ ರಾವ್, ನಾಗರಾಜ್ ರಾವ್ ಬಿ., ಗೋಕುಲ್‌ದಾಸ್ ಪೈ, ಮಂಜುನಾಥ್ ಭಟ್ ಬಿ.ಕೆ ಮತ್ತು ಮಹಾಲಿಂಗೇಶ್ವರ ಕೆ. ಈ ವೇಳೆ ಉಪಸ್ಥಿತರಿದ್ದರು.





