ಬೆಂಗಳೂರು: ಪತ್ರಕರ್ತ ಭೈರಸಂದ್ರ ಗಂಗರಾಜು ನಿಧನ

ಬೆಂಗಳೂರು, ಮಾ. 29: ಬೆಂಗಳೂರು ನಗರ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹಾಗೂ ಪತ್ರಕರ್ತ ಭೈರಸಂದ್ರ ಗಂಗರಾಜು ಇಂದು ಬೆಳಗಿನ ಜಾವ ನಿಧನರಾಗಿದ್ದಾರೆ.
ಕಳೆದ ಕೆಲ ತಿಂಗಳಿಂದ ಅನಾರೋಗ್ಯ ಪೀಡಿತರಾಗಿದ್ದ ಭೈರಸಂದ್ರ ಗಂಗರಾಜು ತೀವ್ರ ಅಸ್ವಸ್ಥಗೊಂಡಿದ್ದರು. ನಗರದ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಅವರು ಇಂದು ಮುಂಜಾನೆ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.
ನೇತ್ರದಾನ: ಗಂಗರಾಜು ಅವರು ತಮ್ಮ ಕಣ್ಣುಗಳನ್ನು ನೇತ್ರದಾನ ಮಾಡಿದ್ದಾರೆ. ಅತ್ಯಂತ ಸರಳ, ಸಜ್ಜನ, ಸರ್ವರ ಹಿತ ಬಯಸುತ್ತಿದ್ದ ಗಂಗರಾಜು ಸಹೊದ್ಯೋಗಿಗಳ ವಲಯದಲ್ಲಿ ಒಂದು ರೀತಿಯಲ್ಲಿ ಅಜಾತಶತ್ರು ಎನಿಸಿದ್ದರು ಎಂಬುದು ಅವರ ಗೆಳೆಯರ ಅಭಿಮತ.
ಗಂಗರಾಜು ಅವರು 2 ದಶಕಗಳಿಗೂ ಹೆಚ್ಚು ಕಾಲ ಪತ್ರಕರ್ತರಾಗಿ ಸೇವೆ ಸಲ್ಲಿಸಿದ್ದು, ಅವರು ಪ್ರಸ್ತುತ ‘ಸಂವಾದ’ ಮಾಸಪತ್ರಿಕೆಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಅವಿವಾಹಿತರಾಗಿದ್ದ ಗಂಗರಾಜು ಸೋದರಿ ಹಾಗೂ ಅಪಾರ ಮಿತ್ರ ಬಳಗವನ್ನು ಅಗಲಿದ್ದಾರೆ.
ಗಂಗರಾಜು ಅವರ ನಿಧನಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಬೆಂಗಳೂರು ಪ್ರೆಸ್‌ಕ್ಲಬ್, ಬೆಂಗಳೂರು ವರದಿಗಾರರ ಕೂಟ, ಹಿರಿಯ ಮತ್ತು ಕಿರಿಯ ಸಹೋದ್ಯೋಗಿಗಳು ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.







