ಮೌಲಾನಾ ಅಬುಲ್ ಕಲಾಂ ಆಝಾದ್ ಪ್ರತಿಮೆ ಧ್ವಂಸ
ರಾಮನವಮಿ ರ‍್ಯಾಲಿ ವೇಳೆ ನಡೆದ ಘಟನೆ

ಹೊಸದಿಲ್ಲಿ, ಮಾ.29: ಪಶ್ಚಿಮ ಬಂಗಾಳವು ಕಳೆದ ಕೆಲವು ದಿನಗಳಿಂದ ಸರಣಿ ಕೋಮು ಹಿಂಸಾಚಾರಕ್ಕೆ ಸಾಕ್ಷಿಯಾಗಿದೆ. ರಾಮ ನವಮಿ ಮೆರವಣಿಗೆಯ ಸಮಯದಲ್ಲಿ ಆರಂಭವಾದ ಹಿಂಸಾಚಾರವು ಕೊನೆಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಹಿಂದುತ್ವ ಗುಂಪುಗಳು ಭಾರತದ ಪ್ರಥಮ ಶಿಕ್ಷಣ ಸಚಿವ ಮೌಲಾನಾ ಅಬುಲ್ ಕಲಾಂ ಆಝಾದ್ ಅವರ ಪ್ರತಿಮೆಯನ್ನು ಧ್ವಂಸಗೊಳಿಸುವ ಮೂಲಕ ಮತ್ತೊಮ್ಮೆ ಹಿಂಸೆಗೆ ನಾಂದಿ ಹಾಡಿದ್ದಾರೆ.
ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಮೌಲಾನಾ ಅಬುಲ್ ಕಲಾಂ ಆಝಾದ್ ಅವರ ಪ್ರತಿಮೆಯನ್ನು ಧರಾಶಾಯಿಗೊಳಿಸುವ ದೃಶ್ಯಾವಳಿಗಳು ಟ್ವಿಟರ್‌ನಲ್ಲಿ ಕಾಣಿಸಿಕೊಳ್ಳುವ ಮೂಲಕ ಘಟನೆಯು ಬೆಳಕಿಗೆ ಬಂದಿದೆ. ಪಶ್ಚಿಮ ಬಂಗಾಳದ ಉತ್ತರ 24 ಪರಗನಾ ಜಿಲ್ಲೆಯ ಕಂಕಿನಾರಾದಲ್ಲಿ ಈ ಘಟನೆ ನಡೆದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ತೃಣಮೂಲ ಕಾಂಗ್ರೆಸ್‌ನ ಅರ್ಜುನ್ ಸಿಂಗ್ ಮತ್ತು ಭತ್ಪರಾ ಮುನ್ಸಿಪಾಲಿಟಿ ಮುಖ್ಯಸ್ಥ ಮಕ್ಸೂದ್ ಆಲಮ್ ಕೂಡಾ ಮೆರವಣಿಗೆಯಲ್ಲಿ ಭಾಗವಹಸಿದ್ದರು. ಆದರೆ ಕೆಟ್ಟ ಉದ್ದೇಶಗಳನ್ನು ಹೊಂದಿದ್ದ ಕೆಲವರು ಈ ಮೆರವಣಿಗೆಯಲ್ಲಿ ನುಸುಳಿ ಬಿಜೆಪಿ ಪರ ಘೋಷಣೆಗಳನ್ನು ಕೂಗಲು ಆರಂಭಿಸಿದರು ಎಂದು ಮಾಧ್ಯಮ ವರದಿ ತಿಳಿಸಿದೆ.
ಘಟನೆಯ ಬಗ್ಗೆ ತನಿಖೆ ನಡೆಸಲು ಆದೇಶಿಸಲಾಗಿದೆ. ಇದಕ್ಕಿಂತ ಹೆಚ್ಚೇನೂ ನನಗೆ ತಿಳಿದಿಲ್ಲ ಎಂದು ಸಿಂಗ್ ಮಾಧ್ಯಮಕ್ಕೆ ತಿಳಿಸಿದ್ದಾರೆ. ಅಸ್ತ್ರಗಳನ್ನು ಹಿಡಿದುಕೊಂಡು ಮೆರವಣಿಗೆಯಲ್ಲಿ ಭಾಗವಹಿಸಬಾರದು ಎಂದು ನಾವು ಸೂಚನೆ ನೀಡಿದ್ದೆವು. ಆದರೆ ಜನರು ಸೇರುತ್ತಲೇ ಹೋಗಿ ಅದೊಂದು ಬೃಹತ್ ಮೆರವಣಿಗೆಯಾಗಿ ಬದಲಾಯಿತು. ಕೈಯಲ್ಲಿ ಕತ್ತಿ ಹಿಡಿದು ಮೆರವಣಿಗೆಯಲ್ಲಿ ಆಗಮಿಸಿದವರನ್ನು ತಡೆಯಲು ನಮ್ಮಿಂದ ಸಾಧ್ಯವಾಗಲಿಲ್ಲ ಎಂದು ಮಕ್ಸೂದ್ ತಿಳಿಸಿದ್ದಾರೆ.
ಘಟನೆಗೆ ಆಡಳಿತಾರೂಢ ತೃಣಮೂಲ ಕಾಂಗ್ರೆಸನ್ನು ಹೊಣೆ ಮಾಡಿರುವ ಬಿಜೆಪಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಸರಕಾರ ವಿಫಲವಾಗಿದೆ ಎಂದು ಆರೋಪಿಸಿದೆ. ಕಂಕಿನಾರಾ ಕೋಮುಸೂಕ್ಷ್ಮ ಪ್ರದೇಶವೆಂದು ತಿಳಿದಿರುವ ಕಾರಣ ಪೊಲೀಸರು ಅಲ್ಲಿ ಸೂಕ್ತ ಭದ್ರತೆಯನ್ನು ಮೊದಲೇ ಮಾಡಬೇಕಿತ್ತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಶ್ ತಿಳಿಸಿದ್ದಾರೆ. ಟಿಎಂಸಿ ರಾಜ್ಯದ ವಿವಿಧ ಭಾಗಗಳಲ್ಲಿ ರಾಮ ನವಮಿ ಮೆರವಣಿಗೆಯನ್ನು ಆಯೋಜಿಸಿತ್ತು. ಈ ಮೆರವಣಿಗೆಗಳಲ್ಲಿ ಜನರು ಅಸ್ತ್ರಗಳನ್ನು ಹಿಡಿದುಕೊಂಡಿದ್ದರು. ಮೊದಲು ಮಮತಾ ಬ್ಯಾನರ್ಜಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಿ. ಹಿಂದಿನಿಂದಲೂ ಖಡ್ಗಗಳು ರಾಮ ನವಮಿಯ ಭಾಗವೇ ಆಗಿದೆ. ಇದೆಲ್ಲವೂ ರಾಮನ ಹೆಸರಲ್ಲಿ ಜನರನ್ನು ಹೆದರಿಸುವ ಉದ್ದೇಶದಿಂದ ಟಿಎಂಸಿ ಸೃಷ್ಟಿಸಿರುವ ಕುತಂತ್ರ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ರಾಹುಲ್ ಸಿನ್ಹಾ ಆರೋಪಿಸಿದ್ದಾರೆ.







