ಮೈಸೂರು: ಚುನಾವಣಾ ಪ್ರಚಾರಕ್ಕೆ ಧುಮುಕಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಚಾಮುಂಡೇಶ್ವರಿ ಕ್ಷೇತ್ರದ ಹಲವು ಗ್ರಾಮಗಳಿಗೆ ಭೇಟಿ, ರೋಡ್ ಶೋ

ಮೈಸೂರು,ಮಾ.29: ತೀವ್ರ ಕುತೂಹಲ ಕೆರಳಿಸಿರುವ ಚಾಮುಂಡೇಶ್ವರಿ ಕ್ಷೇತ್ರದ ಚುನಾವಣೆ ತೀವ್ರ ರಂಗೇರುತ್ತಿದ್ದು, ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲ ಬಾರಿಗೆ ಐದು ಗ್ರಾಮಗಳಿಗೆ ಭೇಟಿ ನೀಡುವ ಮೂಲಕ ಚುನಾವಣಾ ಪ್ರಚಾರ ಕೈಗೊಂಡರು.
ಬೆಂಗಳೂರಿನಿಂದ ವಿಶೇಷ ವಿಮಾನದ ಮೂಲಕ ನೇರವಾಗಿ ಗುರುವಾರ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಬಂದ ಅವರು, ಕಡಕೊಳ ಗ್ರಾಮದಲ್ಲಿ ಸ್ನೇಹಿತರೊಬ್ಬರ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಚಾಮುಂಡೇಶ್ವರಿ ಕ್ಷೇತ್ರದ ವ್ಯಾಪ್ತಿಗೆ ಬರುವ ರಮ್ಮನಹಳ್ಳಿ ಗ್ರಾಮಕ್ಕೆ ಮೊದಲು ಭೇಟಿ ನೀಡಿ ಗ್ರಾಮಸ್ಥರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ನಂತರ ಕಾಳಸಿದ್ಧನ ಹುಂಡಿ, ಹಂಚ್ಯ, ಗಳಗರ ಹುಂಡಿ, ಮೆಲ್ಲಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿದರು ಅಂತಿಮವಾಗಿ ಉದ್ಬೂರು ಗ್ರಾಮಕ್ಕೆ ಭೇಟಿ ನೀಡಿದ ಅವರು, ರೋಡ್ ಶೋ, ನಡೆಸಿದರು.
ಇದೇ ವೇಳೆ ಮಾತನಾಡಿದ ಅವರು ಈ ಬಾರಿ ಮತ್ತೊಮ್ಮೆ ಚುನಾವಣಾ ಕಣಕ್ಕೆ ಧುಮುಕಿದ್ದೇನೆ. ನೀವು ನನ್ನನ್ನು ಕೈಬಿಡುವುದಿಲ್ಲ ಎಂದು ನಂಬಿದ್ದೇನೆ. ಯಾರ ಮಾತಿಗೂ ಕಿವಿಗೊಡಬೇಡಿ, ನನ್ನ ವಿರೋಧಿಗಳು ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಾರೆ. ಅದಕ್ಕೆಲ್ಲ ನೀವು ಮಣೆ ಹಾಕದೇ ನನ್ನನ್ನು ಗೆಲ್ಲಿಸಿ ಎಂದು ಮತದಾರರಲ್ಲಿ ಮನವಿ ಮಾಡಿದರು.
ರಾಜ್ಯಕ್ಕೆ ಅಮಿತ್ ಶಾ ಬಂದರೂ ಹೋದರೂ ಏನು ಮಾಡಲು ಸಾಧ್ಯವಿಲ್ಲ. ನನ್ನನ್ನು ಸೋಲಿಸಬೇಕು ಎಂದು ಬಿಜೆಪಿ, ಜೆಡಿಎಸ್ ಮೈತ್ರಿ ಮಾಡಿಕೊಳ್ಳುತ್ತಿದ್ದಾರೆ. ಇವರು ಎಷ್ಟೇ ಪ್ರಯತ್ನ ಪಟ್ಟರೂ ಕ್ಷೇತ್ರದ ಜನ ನನ್ನನ್ನು ಕೈ ಬಿಡುವುದಿಲ್ಲ. ನಾನು ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುತ್ತೇನೆ. ಇದರಲ್ಲಿ ಯಾವುದೇ ಸಂದೇಹ ಬೇಡ ಎಂದು ಮತ್ತೊಮ್ಮೆ ಸಿದ್ದರಾಮಯ್ಯ ಪುನರುಚ್ಚರಿಸಿದರು.
ಚಾಮುಂಡೇಶ್ವರಿ ಕ್ಷೇತ್ರದ ಜನತೆ ನನ್ನನ್ನು ಕೈಬಿಡುವುದಿಲ್ಲ ಎಂಬ ನಂಬಿಕೆ ಇದೆ. ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಿದ್ದೇನೆ. ಕ್ಷೇತ್ರದಲ್ಲಿ ಮತ್ತಷ್ಟು ಅಭಿವೃದ್ಧಿ ಆಗಬೇಕಿದೆ. ಹಾಗಾಗಿ ಮತ್ತೊಮ್ಮೆ ನನಗೆ ಆಶೀರ್ವಾದ ಮಾಡಿ. ನನ್ನ ಮೇಲೆ ಇಟ್ಟಿರುವ ವಿಶ್ವಾಸವನ್ನು ನಾನು ಸದಾ ಉಳಿಸಿಕೊಂಡು ಹೋಗುತ್ತೇನೆ. ನನಗೆ ಪುನರ್ ಜನ್ಮ ನೀಡಿದ ನಿಮ್ಮ ಋಣವನ್ನು ಎಂದೂ ಮರೆಯಲಾರೆ. ಹಾಗಾಗಿ ಈ ಬಾರಿ ಮತ್ತೊಮ್ಮೆ ನನ್ನನ್ನು ಗೆಲ್ಲಿಸಿ ಎಂದು ಪ್ರಚಾರದ ವೇಳೆ ಮನವಿ ಮಾಡಿದರು.
ಪ್ರಚಾರದ ವೇಳೆ ಮುಖ್ಯಮಂತ್ರಿಗಳ ಪುತ್ರ ಡಾ.ಯತೀಂದ್ರ, ಸೇರಿದಂತೆ ಕಾಂಗ್ರೆಸ್ ಪಕ್ಷದ ಹಲವು ಮುಖಂಡರು ಸಿದ್ದರಾಮಯ್ಯ ಅವರ ಜೊತೆಯಲ್ಲಿದ್ದರು.
ಪ್ರಚಾರ ಮುಗಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಪತ್ನಿ ಮೊಮ್ಮಕ್ಕಳೊಂದಿಗೆ ಬಂಡೀಪುರ ರೆಸಾರ್ಟ್‍ಗೆ ತೆರಳಿದರು.







