ಅರಿಯಡ್ಕ: ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಗೆ ಸೇರ್ಪಡೆ

ಪುತ್ತೂರು, ಮಾ. 29: ಅರಿಯಡ್ಕ ಗ್ರಾಮದ ದರ್ಖಾಸ್‌ನಲ್ಲಿ ಸುಮಾರು 50 ಮಂದಿ ಬಿಜೆಪಿ ಕಾರ್ಯಕರ್ತರು ಗುರುವಾರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಬಡಗನ್ನೂರು ಮತ್ತು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ವಿಶ್ವನಾಥ ರೈ ನೇತೃತ್ವದಲ್ಲಿ ಪಕ್ಷಕ್ಕೆ ಸೇರ್ಪಡೆಯಾದರು.
ಈ ವೇಳೆ ಮಾತನಾಡಿದ ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ವಿಶ್ವನಾಥ ರೈ ಕೇಂದ್ರದ ಮೋದಿ ಸರಕಾರದ ಆಡಳಿತದಿಂದ ಬಡವರಿಗೆ ಅನ್ಯಾಯವಾಗಿದೆ. ಬಡವರ ಪರ ಯಾವುದೇ ಯೋಜನೆಗಳನ್ನು ರೂಪಿಸುವಲ್ಲಿ ಮೋದಿ ಸರಕಾರ ವಿಫಲವಾಗಿದ್ದು ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಸಾಧನೆಯನ್ನು ಮೆಚ್ಚಿ 50 ಮಂದಿ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ. ಮುಂದಿನ ಚುನಾವಣೆಯಲ್ಲಿ ಸೇರ್ಪಡೆಗೊಂಡ ಎಲ್ಲಾ ಸದಸ್ಯರು ಪಕ್ಷದ ಚುನಾವಣಾ ಪ್ರಚಾರದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲಿದ್ದಾರೆ ಎಂದು ಹೇಳಿದರು.
ಅರಿಯಡ್ಕ ವಲಯ ಕಾಂಗ್ರೆಸ್ ಅಧ್ಯಕ್ಷ ರಾಜೀವ ರೈಕುತ್ಯಾಡಿ, ಇಕ್ಬಾಲ್ ಹುಸೇನ್ ಕೌಡಿಚ್ಚಾರ್, ಅಶೋಕ್ ರೈ ದೇರ್ಲ, ಶಿವಕುಮಾರ್ ಕೌಡಿಚ್ಚಾರ್, ಕೆಪಿಸಿಸಿ ಸಾಮಾಜಿಕ ಜಾಲತಾಣದ ರಾಜ್ಯ ಸಮಿತಿ ಸದಸ್ಯ ಕೆ ಸಿ ಅಶೋಕ್ ಶೆಟ್ಟಿ, ಬಶೀರ್ ಕೌಡಿಚ್ಚಾರ್, ರಫೀಕ್ ಶೇಕಮಲೆ, ಅಬ್ದುಲ್‌ರಹಿಮಾನ್ ಮತ್ತಿತರರು ಉಪಸ್ಥಿತರಿದ್ದರು.
ಸೇರ್ಪಡೆಗೊಂಡವರನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಬಡಗನ್ನೂರು ಪಕ್ಷದ ದ್ವಜ ನೀಡಿ ಬರಮಾಡಿಕೊಂಡರು.





