ನ್ಯಾಯಮೂರ್ತಿ ಲೋಯಾ ಸಾವಿನ ಯಾವುದೇ ಮಾಹಿತಿ ಇಲ್ಲ ಎಂದ ಕೇಂದ್ರ ಗೃಹ ಸಚಿವಾಲಯ

ಹೊಸದಿಲ್ಲಿ, ಮಾ. 29: ನಾಗಪುರದಲ್ಲಿ 2014ರಲ್ಲಿ ಸಂಭವಿಸಿದ ಸಿಬಿಐ ವಿಶೇಷ ನ್ಯಾಯಮೂರ್ತಿ ಬಿ.ಎಚ್. ಲೋಯಾ ಅವರ ಸಾವಿನ ಬಗ್ಗೆ ಯಾವುದೇ ವಿವರ ಇಲ್ಲ ಎಂದು ಕೇಂದ್ರ ಗೃಹ ಸಚಿವಾಲಯ ಬುಧವಾರ ಹೇಳಿದೆ. ರಾಜ್ಯಸಭೆಯಲ್ಲಿ ಈ ವಿಷಯದ ಕುರಿತ ಕೆಟಿಎಸ್ ತುಲ್ಸಿ ಅವರ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ ಕೇಂದ್ರ ಗೃಹ ಸಚಿವ ಹಂಸರಾಜ್ ಗಂಗಾರಾಮ್ ಅಹಿರ್, ಪೊಲೀಸ್ ಹಾಗೂ ಸಾರ್ವಜನಿಕ ಆದೇಶ ಸಂವಿಧಾನದ 7ನೇ ಪರಿಚ್ಛೇದದ ಅಡಿಯಲ್ಲಿ ಬರುವ ರಾಜ್ಯದ ವಿಷಯಗಳು ಎಂದಿದ್ದಾರೆ.
ಈ ಬಗ್ಗೆ ಕೇಂದ್ರ ಗೃಹ ಸಚಿವಾಲಯದಲ್ಲಿ ಯಾವುದೇ ಮಾಹಿತಿ ಇಲ್ಲ ಎಂದು ಅವರು ಹೇಳಿದ್ದಾರೆ. “ಸಿಬಿಐ ವಿಶೇಷ ನ್ಯಾಯಾಧೀಶ ಬಿ.ಎಚ್. ಲೋಯಾ ಅವರ ಮೃತದೇಹವನ್ನು ತೆಗೆದುಕೊಂಡು ಹೋಗುವಾಗ ಯಾರಾದರು ವ್ಯಕ್ತಿಗಳು ಜೊತೆಗಿದ್ದಾರೆಯೇ?, ಈ ವ್ಯಕ್ತಿ ನಾಗಪುರ ಆಸ್ಪತ್ರೆಯ ವೈದ್ಯರಿಗೆ ನ್ಯಾಯಮೂರ್ತಿ ಲೋಯಾ ಅವರ ಯಾವುದಾದರೂ ವಿವರ ಹೇಳಿದ್ದಾರಾ?” ಎಂದು ತುಲ್ಸಿ ಪ್ರಶ್ನಿಸಿದರು. ಆಸ್ಪತ್ರೆಯ ದಾಖಲೆ ಪ್ರಕಾರ ನ್ಯಾಯಮೂರ್ತಿ ಲೋಯಾ ಸಾವನ್ನಪ್ಪಿದ ಸಮಯ ಹಾಗೂ ಸಾವಿಗೆ ಕಾರಣ ತಿಳಿಸುವಂತೆ ತುಲ್ಸಿ ಆಗ್ರಹಿಸಿದರು. ನ್ಯಾಯಮೂರ್ತಿ ಲೋಯಾ ಅವರು ಸೊಹ್ರಾಬುದ್ದೀನ್ ಶೇಖ್ ನಕಲಿ ಎನ್‌ಕೌಂಟರ್ ಪ್ರಕರಣದ ವಿಚಾರಣೆ ನಡೆಸುತ್ತಿದ್ದರು. ಸಹೋದ್ಯೋಗಿಯ ಪುತ್ರಿಯ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು ನಾಗಪುರಕ್ಕೆ ತೆರಳಿದಾಗ 2014 ಡಿಸೆಂಬರ್ 1ರಂದು ಅವರು ಸಂಶಯಾಸ್ಪದವಾಗಿ ಮೃತಪಟ್ಟಿದ್ದರು. ನ್ಯಾಯಮೂರ್ತಿ ಲೋಯಾ ಅವರ ಸಾವಿನ ಪ್ರಕರಣವನ್ನು ಸ್ವತಂತ್ರ ತನಿಖೆ ನಡೆಸಬೇಕು ಎಂದು ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದೆ.





