ಮೂಡಿಗೆರೆ ಮೂಲದ ಮಹಿಳೆಯಿಂದ ಹನಿ ಟ್ರ್ಯಾಪ್: ಆರೋಪ
ದೂರು ದಾಖಲಿಸಲು ಪೊಲೀಸರಿಂದ ನಿರ್ಲಕ್ಷ್ಯ: ದೂರುದಾರನ ಅಳಲು

ಮಹಿಳೆ ಜೊತೆ ಗೌರಿಶಂಕರ್
ಚಿಕ್ಕಮಗಳೂರು, ಮಾ.29: ಬೆಂಗಳೂರಿನಲ್ಲಿ ನೆಲೆಸಿರುವ ಮೂಡಿಗೆರೆ ಮೂಲದ ವಿವಾಹಿತ ಮಹಿಳೆಯೊಬ್ಬಳಿಂದ ತಾನು ಹನಿಟ್ರ್ಯಾಪ್ ಗೆ ಒಳಗಾಗಿ 4 ಲಕ್ಷಕ್ಕೂ ಹೆಚ್ಚು ಹಣ ಕಳೆದುಕೊಂಡಿದ್ದೇನೆ. ಇನ್ನೂ ಹಣಕ್ಕಾಗಿ ಮಹಿಳೆ ಪೀಡಿಸುತ್ತಿದ್ದಾಳೆ. ಆಕೆಯಿಂದ ಇದ್ದ ಕೆಲಸವನ್ನೂ ಕಳೆದುಕೊಂಡಿದ್ದೇನೆ. ಸಂಸಾರದಲ್ಲೂ ಒಡಕು ಮೂಡಿದೆ. ಮಹಿಳೆಯ ಬ್ಲಾಕ್ಮೇಲ್ ಬಗ್ಗೆ ಪೊಲೀಸರಿಗೆ ದೂರು ನೀಡಿದರೆ ಪ್ರಕರಣ ದಾಖಲಿಸದೇ ನಿರ್ಲಕ್ಷ್ಯ ವಹಿಸಿದ್ದಾರೆಂದು ನಗರದ ಕಲ್ಯಾಣ ನಗರದ ನಿವಾಸಿ ಗೌರಿಶಂಕರ್ ಎಂಬವರು ಆರೋಪಿಸಿದ್ದಾರೆ.
ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಗೌರಿಶಂಕರ್, ಚಿಕ್ಕಮಗಳೂರಿನ ಎಸ್ಟೇಟ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ತನಗೆ ಕಳೆದ ಕೆಲ ತಿಂಗಳ ಹಿಂದೆ ಫೇಸ್ಬುಕ್ ಮೂಲಕ ಸದ್ಯ ಬೆಂಗಳೂರಿನ ಪೀಣ್ಯದಲ್ಲಿ ನೆಲೆಸಿರುವ ಮೂಡಿಗೆರೆ ಮೂಲದ ಮಹಿಳೆ ಪರಿಚಯವಾಗಿದೆ. ಈ ಪರಿಚಯ ಸ್ನೇಹಕ್ಕೆ ತಿರುಗಿತ್ತು. ಆಕೆ ಚಿಕ್ಕಮಗಳೂರಿಗೂ ತನ್ನೊಂದಿಗೆ ಬಂದಿದ್ದಳು. ಕೆಲ ತಿಂಗಳು ಕಳೆದ ಬಳಿಕ ಮಹಿಳೆ ತಾನು ಗಭೀಣಿಯಾಗಿದ್ದೇನೆಂದು ಹೇಳಿ ಬ್ಲಾಕ್ ಮೇಲ್ ಮಾಡಿ ಇದುವರೆಗೂ 4 ಲಕ್ಷ ರೂ., 85 ಸಾವಿರ ರೂ. ವಸೂಲಿ ಮಾಡಿದ್ದಾಳೆಂದು ಗೌರಿ ಶಂಕರ್ ಆರೋಪಿಸಿದ್ದಾರೆ.
"ಈ ಬಗ್ಗೆ ಎಲ್ಲೂ ತಿಳಿಸಬಾರದೆಂದರೆ ಸಿಂಗಲ್ ಸೆಟಲ್ಮೆಂಟ್ ಆಗಬೇಕು. 5 ಲಕ್ಷ ರೂ. ಕೊಟ್ಟಲ್ಲಿ ನಿನ್ನ ತಂಟೆಗೆ ಬರುವುದಿಲ್ಲ. ತಪ್ಪಿದಲ್ಲಿ ಮಹಿಳಾ ಸಂಘಟನೆಗಳೊಂದಿಗೆ ಬರುತ್ತೇನೆ ಎಂದು ಪದೇ ಪದೇ ಕರೆ ಮಾಡಿ ಬ್ಲಾಕ್ಮೇಲ್ ಮಾಡುತ್ತಿದ್ದಾಳೆ" ಎಂದು ಗೌರಿಶಂಕರ್ ಆರೋಪಿಸಿದ್ದಾರೆ. ಇದರಿಂದ ಮಾನಸಿಕ ನೆಮ್ಮದಿ, ಹಣ ಕಳೆದುಕೊಂಡಿದ್ದೇನೆ. ಈಕೆಯಿಂದಾಗಿ ಎಸ್ಟೇಟ್ ಕೆಲಸವನ್ನೂ ಕಳೆದುಕೊಂಡಿದ್ದೇನೆ. ತನ್ನ ಸಂಸಾರದಲ್ಲೂ ಒಡಕು ಮೂಡಿದೆ. ಈಕೆಯ ವಂಚನೆಯ ಜಾಲದಿಂದ ತನಗೆ ಮುಕ್ತಿ ಕೊಡಿಸಬೇಕೆಂದು ನಗರದ ಪೊಲೀಸರಿಗೆ ದೂರು ನೀಡಲು ಹೋದರೆ ಅವರು ದೂರು ದಾಖಲಿಸಿದೇ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ತನಗೆ ಮಾದ್ಯಮದವರೇ ನ್ಯಾಯ ದೊರಕಿಸಿಕೊಡಬೇಕೆಂದು ಗೌರಿ ಶಂಕರ್ ಹೇಳಿದ್ದಾರೆ.
ಮಹಿಳೆಗೆ ಈಗಾಗಲೇ ಮದುವೆಯಾಗಿದೆಯಾದರೂ ಹಣಕ್ಕಾಗಿ ಯುವಕರು, ವಿವಾಹಿತ ಹಣವಂತರನ್ನು ಬಲೆಗೆ ಬೀಳಿಸಿಕೊಂಡು ಹನಿಟ್ರ್ಯಾಪ್ ಮಾಡುತ್ತಿದ್ದಾಳೆ. ಪಿಣ್ಯಾದಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿರುವ ಆಕೆ ಅದೇ ಮಳಿಗೆಯ ಪಕ್ಕದಲ್ಲಿ ಕ್ಲಿನಿಕ್ ನಡೆಸುತ್ತಿರುವ ವೈದ್ಯರನ್ನು ಹನಿ ಟ್ರ್ಯಾಪ್ ಬಲೆಗೆ ಬೀಳಿಸಕೊಂಡು ಅವರಿಂದ 9 ಲಕ್ಷ ರೂ. ಪಡೆದಿದ್ದಾಳೆ. ಇನ್ನೂ 15 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಾಳೆ. ಈ ಬಗ್ಗೆ ವೈದ್ಯರು ಹೇಳಿರುವ ದಾಖಲೆ ತನ್ನ ಬಳಿ ಇದೆ ಎಂದು ಗೌರಿಶಂಕರ್ ಆರೋಪಿಸಿದ್ದಾರೆ.
ಈಕೆಯ ಹಿಂದೆ ದೊಡ್ಡ ಜಾಲವೇ ಇದೆ. ಈಕೆಯನ್ನು ಹೀಗೆಯೇ ಬಿಟ್ಟಲ್ಲಿ ಅಮಾಯಕರು ಹಣ, ನೆಮ್ಮದಿ, ಜೀವನವನ್ನೇ ಕಳೆದುಕೊಳ್ಳುತ್ತಾರೆ. ಈ ಕಾರಣಕ್ಕೆ ತಾನು ಗುರುವಾರ ಪೊಲೀಸರಿಗೆ ದೂರು ನೀಡಲು ಹೋದರೆ ನಗರ ಠಾಣಾಧಿಕಾರಿ ದೂರು ದಾಖಲಿಸಲಿಲ್ಲ. ಆಕೆ ಮತ್ತೆ ಕರೆ ಮಾಡಿ ಬೆದರಿಸಿದರೆ ತಿಳಿಸಿ ಎಂದಷ್ಟೇ ಹೇಳಿ ಎಂದು ಕಳುಹಿಸಿದ್ದಾರೆ. ಇದರಿಂದ ಮನಸ್ಸಿಗೆ ಬೇಜಾರಾಗಿದೆ.
- ಗೌರಿಶಂಕರ್







