ಬಿಜೆಪಿಯನ್ನು ಸೋಲಿಸಲು ಜಾತ್ಯತೀತ ಪಕ್ಷಗಳು ಒಂದಾಗಬೇಕು: ಪ್ರಗತಿಪರರ ನಿಯೋಗದಿಂದ ಸಿ.ಎಂ ಗೆ ಮನವಿ

ಬೆಂಗಳೂರು, ಮಾ.29: ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಕಾಂಗ್ರೆಸ್ ಹಾಗೂ ಜಾತ್ಯತೀತ ಪಕ್ಷಗಳು ಒಗ್ಗೂಡಿ ಜಾತ್ಯತೀತ ಮತ ವಿಭಜನೆ ತಪ್ಪಿಸುವ ಮೂಲಕ ಬಿಜೆಪಿ ವಿರುದ್ಧ ಚುನಾವಣಾ ತಂತ್ರ ರೂಪಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪ್ರಗತಿಪರರು ಮನವಿ ಮಾಡಿದ್ದಾರೆ.
ಗುರುವಾರ ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾಗೆ ಭೇಟಿ ನೀಡಿದ ನಿಯೋಗ ಸಂವಿಧಾನ ಉಳಿವಿಗಾಗಿ ಕರ್ನಾಟಕ ವೇದಿಕೆಯ ಅಧ್ಯಕ್ಷ ಎ.ಕೆ. ಸುಬ್ಬಯ್ಯ ನೇತೃತ್ವದಲ್ಲಿ ಮುಖ್ಯಮಂತ್ರಿಗಳೊಂದಿಗೆ ವಿಧಾನಸಭೆಯ ಚುನಾವಣೆ ಕುರಿತು ಚರ್ಚಿಸಿ, ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಜಾತ್ಯತೀತ ಪಕ್ಷಗಳು ಒಗ್ಗೂಡಬೇಕೆಂದು ಸಲಹೆ ನೀಡಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಎ.ಕೆ. ಸುಬ್ಬಯ್ಯ, ಧರ್ಮದ ಹೆಸರಿನಲ್ಲಿ ದೇಶ ವಿಭಜಿಸಿ ಕೋಮುವಾದ ಆಡಳಿತ ನಡೆಸುವ ಬಿಜೆಪಿಯನ್ನು ರಾಜ್ಯದಲ್ಲಿ ಅಧಿಕಾರಕ್ಕೆ ಬರದಂತೆ ತಡೆಯಲು ಎಲ್ಲ ಜಾತ್ಯತೀತ ಪಕ್ಷಗಳೂ ಒಗ್ಗೂಡಬೇಕಾಗಿದೆ. ಒಂದು ವೇಳೆ ಜಾತ್ಯತೀತರ ಮತಗಳು ವಿಭಜನೆಯಾದರೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಹೀಗಾಗಿ, ಜಾತ್ಯತೀತ ಪಕ್ಷಗಳು ಒಂದಾಗಿ ಆಯ್ದ ಕ್ಷೇತ್ರಗಳಲ್ಲಿ ಪರಸ್ಪರ ಹೊಂದಾಣಿಕೆ ಮೂಲಕ ಬಿಜೆಪಿ ವಿರುದ್ಧ ಒಬ್ಬ ಅಭ್ಯರ್ಥಿಯನ್ನು ಕಣಕಿಳಿಸಬೇಕು ಎಂದು ತಿಳಿಸಿದರು.
ಕಾಂಗ್ರೆಸ್ ತನ್ನ ಪಕ್ಷದೊಳಗಿನ ಆಂತರಿಕ ಬಿಕ್ಕಟ್ಟುಗಳನ್ನು ಶಮನಗೊಳಿಸಿ ಚುನಾವಣೆಗೆ ಸಿದ್ಧವಾಗಬೇಕು. ಜೆಡಿಎಸ್ ಪಕ್ಷವು ಬಿಜೆಪಿಯ ’ಬಿ’ ಟೀಂ ಎಂಬ ಆಪಾದನೆಯಿಂದ ಹೊರಬರಬೇಕಾದರೆ ಜಾತ್ಯತೀತ ಪಕ್ಷಗಳೊಂದಿಗೆ ಕೈ ಜೋಡಿಸಿ ರಾಜ್ಯದಲ್ಲಿ ಬಿಜೆಪಿಯನ್ನು ತೊಡೆದು ಹಾಕಬೇಕು. ಈ ಸಂಬಂಧ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರನ್ನು ಭೇಟಿ ಮಾಡಿ ಚರ್ಚಿಸುತ್ತೇವೆ. ಕಾಂಗ್ರೆಸ್ ಪಕ್ಷದ ಬೆಂಬಲ ಇಲ್ಲದೆ ಯಾವುದೇ ಪಕ್ಷದಿಂದ ಬಿಜೆಪಿಯನ್ನು ಮಣಿಸಲು ಸಾಧ್ಯವಿಲ್ಲ. ಹೀಗಾಗಿ ಎಲ್ಲ ಜಾತ್ಯತೀತ ಪಕ್ಷಗಳು ಒಗ್ಗೂಡಬೇಕೆಂದು ಎ.ಕೆ.ಸುಬ್ಬಯ್ಯ ನುಡಿದರು.
ಈ ಸಂದರ್ಭದಲ್ಲಿ ಪ್ರಗತಿಪರರಾದ ಬಿ.ಟಿ.ಲಲಿತಾ ನಾಯಕ್, ಇರ್ಶಾದ್ ಅಹಮದ್ ದೇಸಾಯಿ, ಎಸ್.ಎಂ. ಇಕ್ಬಾಲ್, ಪತ್ರಕರ್ತ ಇಂದೂಧರ ಹೊನ್ನಾಪುರ, ಬಾಬು ಮ್ಯಾಥ್ಯೂ, ವಿ.ನಾಗರಾಜ್, ಕೆ.ಎಲ್.ಅಶೋಕ್, ಅನೀಶ್ ಪಾಶಾ, ಸೆಬಾಸ್ಟಿನ್ ದೇವರಾಜ್ ಸೇರಿದಂತೆ ಪ್ರಮುಖರಿದ್ದರು.
ರಾಜ್ಯದೆಲ್ಲೆಡೆ ಇರುವ ಜಾತ್ಯತೀತ ಮತದಾರರನ್ನು ಜಾಗೃತಗೊಳಿಸಿ ಬಿಜೆಪಿ ವಿರುದ್ಧ ಕಾರ್ಯತಂತ್ರ ರೂಪಿಸುವ ನಿಟ್ಟಿನಲ್ಲಿ ಪ್ರಗತಿಪರರು ಸಮಾವೇಶ, ಸಂವಾದ ನಡೆಸಲಿದ್ದಾರೆ.
-ಎ.ಕೆ. ಸುಬ್ಬಯ್ಯ, ಅಧ್ಯಕ್ಷ, ಸಂವಿಧಾನ ಉಳಿವಿಗಾಗಿ ಕರ್ನಾಟಕ







