ಜೀವನ ಪದ್ದತಿಯಲ್ಲಿ ದಾರಿ ತಪ್ಪದಂತೆ ಮಠ ಮಂದಿರಗಳು ಕೆಲಸ ಮಾಡುತ್ತಿವೆ: ಪೇಜಾವರ ಶ್ರೀ
ಪುತ್ತೂರಿನ ಶ್ರೀ ರಾಘವೇಂದ್ರ ಮಠದಲ್ಲಿ ಮಾಣಿಕ್ಯೋತ್ಸವ

ಪುತ್ತೂರು, ಮಾ. 29: ಜೀವನ ಪದ್ದತಿಯಲ್ಲಿ ದಾರಿ ತಪ್ಪದಂತೆ ಮಠ ಮಂದಿರಗಳು ದೀಪಸ್ಥಂಭದಂತೆ ದಾರಿ ತೋರಿಸುವ ಕೆಲಸ ಮಾಡುತ್ತಿದೆ. ಇವುಗಳ ಮಾರ್ಗದರ್ಶನ ಎಂದಿಗೂ ಅಗತ್ಯವಾಗಿದೆ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.
ಪುತ್ತೂರಿನ ಶ್ರೀ ರಾಘವೇಂದ್ರ ಮಠದ ಸ್ಥಾಪನೆಯ 40ನೇ ವರ್ಷದ ಅಂಗವಾಗಿ ನಡೆಯುತ್ತಿರುವ ಮಾಣಿಕ್ಯೋತ್ಸವದ ಐದನೇ ದಿನವಾದ ಗುರುವಾರ ಸಂಜೆ ನಡೆದ ಧರ್ಮಸಭೆಯಲ್ಲಿ ಅವರು ಆಶೀರ್ವಚನ ನೀಡಿದರು. ಸಮುದ್ರದಲ್ಲಿ ಸಂಚಾರ ಮಾಡುವ ನಾವೆಗಳು ದಿಕ್ಕು ತಪ್ಪದಂತೆ ದೀಪಸ್ತಂಭಗಳು ದಾರಿ ತೋರುವ ಕೆಲಸ ಮಾಡಿದರೆ, ಸಂಸಾರದಲ್ಲಿ ಇದ್ದುಕೊಂಡು ಜೀವನ ನಡೆಸುತ್ತಿರುವ ಸಂದರ್ಭದಲ್ಲಿ ಮನುಷ್ಯ ಮಾತ್ರರಿಗೆ ದಾರಿ ತಪ್ಪದಂತೆ ದಿಕ್ಕು ತೋರುವ ದೀಪಸ್ತಂಭಗಳಾಗಿ ಮಠ, ಮಂದಿರಗಳು ಕೆಲಸ ಮಾಡುತ್ತಾ ಬಂದಿವೆ. ಲೈಟ್‌ಹೌಸ್‌ಗಳು ನಾವೆಗಳಿಗೆ ಹೇಗೆ ಮುಖ್ಯವೋ ಮನುಷ್ಯರಿಗೂ ಮುಖ್ಯ. ಸಂಸಾರ ಸಾಗರದಲ್ಲಿ ಈಜುತ್ತಿರುವ ಮಾನವನಿಗೆ ಮಠ, ಮಂದಿರಗಳ ಮಾರ್ಗದರ್ಶನ ಯಾವಾಗಲೂ ಬೇಕಾಗುತ್ತದೆ. ಎಂದು ಹೇಳಿದರು.
ಮಾಧ್ವ ಸಿದ್ಧಾಂತದ ಮೂಲ ಪುರುಷರಾದ ಮಧ್ವಾಚಾರ್ಯರು ಕೇವಲ ತನ್ನ ಮತದವರಿಗೆ ಮಾತ್ರ ಅನುಗ್ರಹ ಮಾಡಿದ್ದಲ್ಲ. ತಮಗೆ ಶರಣಾದ, ಎದುರಾದ ಮುಸ್ಲಿಂ ಸುಲ್ತಾನರಿಗೂ ಅವರು ಅನುಗ್ರಹ ಮಾಡಿದ ನಿದರ್ಶನಗಳಿವೆ. ಮಾಧ್ವ ಸಂಪ್ರದಾಯದ ಅನೇಕ ಗುರುಗಳು ಈ ಕೆಲಸ ಮಾಡಿದ್ದಾರೆ. ರಾಘವೇಂದ್ರ ಸ್ವಾಮಿಗಳೂ ಮಾಡಿದ್ದಾರೆ. ತನ್ನ ಮತ ಧರ್ಮದಲ್ಲಿ ಅಪಾರ ನಿಷ್ಠೆ ಮತ್ತು ಇತರ ಮತ ಧರ್ಮಗಳ ಬಗೆಗೆ ಸಹಿಷ್ಣುತೆಯನ್ನು ಮಾಧ್ವ ಮತವೂ ಸೇರಿದಂತೆ ಭಾರತದ ಎಲ್ಲ ಮತ ಧರ್ಮಗಳು ಅನುಸರಿಸುತ್ತಾ ಬಂದಿವೆ. ಇದು ಭಾರತೀಯ ಹಿಂದೂ ಪರಂಪರೆಯ ಶ್ರೀಮಂತಿಕೆಯಾಗಿದೆ ಎಂದು ಹೇಳಿದರು.
ಸೇವಾಕರ್ತರಾದ ನಾರಾಯಣ ಉಪಾಧ್ಯಾಯ ದಂಪತಿಗಳು, ವೇದಮೂರ್ತಿ ವಸಂತ ಕೆದಿಲಾಯ, ಗೀತಾ ಸಾಹಿತ್ಯ ಸಂಭ್ರಮದ ಸೇವಾಕರ್ತರಾದ ವಿನೋದ್ ಎ.ಅವರನ್ನು ಈ ಸಂದರ್ಭದಲ್ಲಿ ಸ್ವಾಮೀಜಿ ಸನ್ಮಾನಿಸಿದರು.
ಮಾಣಿಕ್ಯೋತ್ಸವ ಸಮಿತಿಯ ಅಧ್ಯಕ್ಷ ಸವಣೂರು ಕೆ. ಸೀತಾರಾಮ ರೈ ಸ್ವಾಗತಿಸಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಮಿತಿಯ ಪದಾಧಿಕಾರಿಗಳಾದ ರಾಧಾಕೃಷ್ಣ ಬೋರ್ಕರ್, ಪಾಂಡುರಂಗ ಹೆಗ್ಡೆ, ಶ್ರೀ ಗುರು ರಾಘವೇಂದ್ರ ಸ್ವಾಮಿ ಸೇವಾ ಸಮಿತಿಯ ಕಾರ್ಯದರ್ಶಿ ಪೂವಪ್ಪ ಯು. ಉಪಸ್ಥಿತರಿದ್ದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಜೇಶ್ ಬನ್ನೂರು ವಂದಿಸಿದರು. ಭಾಸ್ಕರ ಬಾರ್ಯ ಕಾರ್ಯಕ್ರಮ ನಿರ್ವಹಿಸಿದರು.







