330 ಕೋಟಿ ರೂ. ಹೂಡಿಕೆಗೆ ಕಾರ್ಪೊರೇಟ್ ಕಂಪೆನಿಗಳಿಗೆ ಆದಿತ್ಯನಾಥ್ ಕರೆ
ಶ್ರೀರಾಮನ ಪ್ರತಿಮೆ ನಿರ್ಮಾಣ

ಲಕ್ನೊ, ಮಾ.29: ಅಯೋಧ್ಯೆಯ ಸರಯೂ ನದಿ ದಡದಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿರುವ ಶ್ರೀರಾಮನ ನೂರು ಮೀಟರ್ ಎತ್ತರದ ಪ್ರತಿಮೆ ನಿರ್ಮಾಣಕ್ಕೆ ಖಾಸಗಿ ಕಂಪೆನಿಗಳು ಹಣ ಹೂಡಲು ಉತ್ತರ ಪ್ರದೇಶ ಸರಕಾರ ಆಹ್ವಾನಿಸಿದೆ.
ಮುಖ್ಯಮಂತ್ರಿ ಆದಿತ್ಯನಾಥ್‌ರ ಮಹಾತ್ವಾಕಾಂಕ್ಷಿ ಯೋಜನೆಯಾಗಿರುವ ರಾಮ ಪ್ರತಿಮೆ ನಿರ್ಮಾಣಕ್ಕೆ 330 ಕೋಟಿ ರೂ. ವೆಚ್ಚವಾಗಲಿದೆ. ಈ ಮೊತ್ತವನ್ನು ಕಾರ್ಪೊರೇಟ್ ಸಂಸ್ಥೆಗಳು ತಮ್ಮ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ (ಸಿಎಸ್‌ಆರ್) ಬಜೆಟ್‌ನಿಂದ ನೀಡುವಂತೆ ಆದಿತ್ಯನಾಥ್ ಸರಕಾರ ಮನವಿ ಮಾಡಿದೆ. ಉ.ಪ್ರದೇಶದ ಪ್ರವಾಸೋದ್ಯಮ ಇಲಾಖೆ ಬಿಡುಗಡೆ ಮಾಡಿರುವ, ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿಯಡಿಯಲ್ಲಿ ಹೂಡಿಕೆಗೆ ಅವಕಾಶ ಎಂಬ ಹೆಸರಿನ ಪುಸ್ತಕದಲ್ಲಿ ಅಯೋಧ್ಯಾ, ವಾರಣಾಸಿ ಗೋರಖ್‌ಪುರ ಮುಂತಾದೆಡೆ ಇದೇ ರೀತಿಯ 86 ಪ್ರವಾಸೋದ್ಯಮ ಯೋಜನೆಗಳನ್ನು ಉಲ್ಲೇಖಿಸಲಾಗಿದೆ.
ಸದ್ಯ ಈ ಯೋಜನೆಯು ರಾಜಕೀಯ ವಲಯದಲ್ಲಿ ಕೋಲಾಹಲವೆಬ್ಬಿಸಿದೆ. ಸಿಎಸ್‌ಆರ್‌ನಡಿ ಖಾಸಗಿ ಸಂಸ್ಥೆಗಳಿಗೆ ತೆರಿಗೆ ವಿನಾಯಿತಿ ನೀಡಲಾಗುತ್ತದೆ. ಹಾಗಾಗಿ ಕೊನೆಯಲ್ಲಿ ಈ ಯೋಜನೆಗಳಿಗೆ ಪಾವತಿಸುವವರು ಸಾಮಾನ್ಯ ಜನರೇ ಆಗಿರುತ್ತಾರೆ. ನಿಮ್ಮದು ದೊಡ್ಡ ಪಕ್ಷ. ನೀವ್ಯಾಕೆ ನಿಮ್ಮ ಪಕ್ಷದ ಸದಸ್ಯರಿಂದಲೇ ಹಣವನ್ನು ಕೇಳಬಾರದು?, ಸಿಎಸ್‌ಆರ್ ನಿಧಿಯನ್ನು ಇಂಥ ಉದ್ದೇಶಗಳಿಗೆ ಬಳಸುವ ಹಾಗಿಲ್ಲ. ಆದರೆ ಆದಿತ್ಯನಾಥ್ ದಿನದಿಂದ ದಿನಕ್ಕೆ ಸಾಮಾಜಿಕ ಜವಾಬ್ದಾರಿಯ ವ್ಯಾಖ್ಯಾನವನ್ನು ಬದಲಿಸುತ್ತಿದ್ದಾರೆ ಎಂದು ಸಮಾಜವಾದಿ ಪಕ್ಷದ ವಕ್ತಾರೆ ಜೂಹಿ ಸಿಂಗ್ ಆರೋಪಿಸಿದ್ದಾರೆ.
ಈ ಹಿಂದೆ ಇಂಥ ನಿಧಿಗಳನ್ನು ಶಾಲೆಗಳು, ಮಹಿಳೆ ಮತ್ತು ಮಕ್ಕಳ ಕಲ್ಯಾಣ ಮುಂತಾದ ಉತ್ತಮ ಕಾರ್ಯಗಳಿಗೆ ಬಳಸಲಾಗುತ್ತಿತ್ತು ಎಂದು ಅವರು ತಿಳಿಸಿದ್ದಾರೆ. ನಾವು ಖಾಸಗಿ ಸಂಸ್ಥೆಗಳು ಹಣ ನೀಡುವಂತೆ ಮನವಿ ಮಾಡಬಹುದೇ ಹೊರತು ಒತ್ತಡ ಹೇರುವಂತಿಲ್ಲ. ಎಲ್ಲ ಉದ್ಯಮ ಸಂಸ್ಥೆಗಳೂ ದೇವಾಲಯಗಳಿಗೆ ಹಣ ಹೂಡುತ್ತವೆ. ಇದು ಧಾರ್ಮಿಕ ಪ್ರವಾಸೋದ್ಯಮವಲ್ಲ. ಉದ್ಯೋಗ ಸೃಷ್ಟಿಸುವ ಪ್ರಯತ್ನ ಎಂದು ರಾಜ್ಯ ಪ್ರವಾಸೋದ್ಯಮ ಸಚಿವೆ ರೀಟಾ ಬಹುಗುಣ ಜೋಶಿ ತಿಳಿಸಿದ್ದಾರೆ.







