ರೈಲ್ವೆ ನೌಕರರಿಗೆ ಸಿಹಿಸುದ್ದಿ

ಹೊಸದಿಲ್ಲಿ,ಮಾ.29: ರೈಲ್ವೆ ನೌಕರರು ಇದೇ ಮೊದಲ ಬಾರಿಗೆ ರಜಾಸಹಿತ ಪ್ರವಾಸ ಸೌಲಭ್ಯ(ಎಲ್‌ಟಿಸಿ) ಪಡೆಯಲಿದ್ದಾರೆ.
ಭಾರತೀಯ ರೈಲ್ವೆಯ ಉದ್ಯೋಗಿಗಳು ಮತ್ತು ಅವರ ಪತ್ನಿ/ಪತಿ ಉಚಿತ ಪಾಸ್‌ನ ಸೌಲಭ್ಯ ಹೊಂದಿರುವುದರಿಂದ ಹಾಲಿ ಎಲ್‌ಟಿಸಿ ನಿಯಮಗಳಂತೆ ಎಲ್‌ಟಿಸಿ ಸೌಲಭ್ಯಕ್ಕೆ ಅವರು ಅರ್ಹರಾಗಿಲ್ಲ. ಆದರೆ ಅವರಿಗೂ ಎಲ್‌ಟಿಸಿ ಸೌಲಭ್ಯವನ್ನು ವಿಸ್ತರಿಸುವಂತೆ ಏಳನೇ ವೇತನ ಆಯೋಗವು ಶಿಫಾರಸು ಮಾಡಿದೆ. ಈ ಹಿನ್ನೆಲೆಯಲ್ಲಿ ರೈಲ್ವೆ ಉದ್ಯೋಗಿಗಳಿಗೆ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಅಖಿಲ ಭಾರತ ಎಲ್‌ಟಿಸಿ ಸೌಲಭ್ಯವನ್ನು ನೀಡಬಹುದಾಗಿದೆ ಎಂದು ನಿರ್ಧರಿಸಲಾಗಿದೆ ಎಂದು ಸಿಬ್ಬಂದಿ,ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿ,ಸಿಬ್ಬಂದಿ ಮತ್ತು ತರಬೇತಿ ಸಚಿವಾಲಯವು ಮಾ.27ರಂದು ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಿದೆ. ಅಖಿಲ ಭಾರತ ಎಲ್‌ಟಿಸಿಯು ರೈಲ್ವೆ ಉದ್ಯೋಗಿಗಳಿಗೆ ಐಚ್ಛಿಕವಾಗಿರಲಿದೆ ಎಂದಿದೆ.
ರೈಲ್ವೆ ಉದ್ಯೋಗಿಗಳು ತವರೂರಿಗೆ ಎಲ್‌ಟಿಸಿ ಸೌಲಭ್ಯವನ್ನು ಪಡೆಯುವಂತಿಲ್ಲ ಮತ್ತು ಎಲ್‌ಟಿಸಿ ಸೌಲಭ್ಯವನ್ನು ಪಡೆಯಲು ಬಯಸುವ ವರ್ಷದಲ್ಲಿ ತಮಗೆ ಸಿಗುವ ಪ್ರಿವಿಲೆಜ್ ಪಾಸ್(ರಿಯಾಯಿತಿಯ ಅಥವಾ ಉಚಿತ ಟಿಕೆಟ್‌ಗಳು)ಗಳನ್ನು ಇಲಾಖೆಗೆ ಮರಳಿಸಬೇಕಾಗುತ್ತದೆ ಎಂದು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಆದರೆ ಡ್ಯೂಟಿ ಪಾಸ್, ಶಾಲಾ ಪಾಸ್ ಮತ್ತು ವ್ಯೆದ್ಯಕೀಯ ಕಾರಣದಿಂದ ವಿಶೇಷ ಪಾಸ್‌ಗಳಂತಹ ಇತರ ವರ್ಗಗಳ ಪಾಸ್‌ಗಳಿಗೆ ಅವರ ಅರ್ಹತೆಯು ಮುಂದುವರಿ ಯುತ್ತದೆ ಎಂದು ಅದು ತಿಳಿಸಿದೆ.







