ರೊಹಿಂಗ್ಯಾ ನಿರಾಶ್ರಿತರ ಆರೋಗ್ಯ ಸೇವೆಗಳಿಗೆ ನೆರವು ನೀಡಿ
ಜಾಗತಿಕ ಸಮುದಾಯಕ್ಕೆ ಡಬ್ಲ್ಯೂಎಚ್‌ಒ ಮನವಿ

ಹೊಸದಿಲ್ಲಿ,ಮಾ.29: ಬಾಂಗ್ಲಾದೇಶದಲ್ಲಿ ಆಶ್ರಯ ಪಡೆದುಕೊಂಡಿರುವ 13 ಲಕ್ಷ ರೊಹಿಂಗ್ಯಾ ನಿರಾಶ್ರಿತರಿಗೆ ಸೂಕ್ತ ಆರೋಗ್ಯ ಸೇವೆಗಳನ್ನೊದಗಿಸಲು ಉದಾರವಾಗಿ ನೆರವು ನೀಡುವಂತೆ ವಿಶ್ವ ಆರೋಗ್ಯ ಸಂಸ್ಥೆ(ಡಬ್ಲೂಎಚ್‌ಒ)ಯು ಜಾಗತಿಕ ಸಮುದಾಯವನ್ನು ಕೋರಿಕೊಂಡಿದೆ. ಕಾಕ್ಸ್‌ಬಜಾರ್ ಶಿಬಿರದಲ್ಲಿ ಬದುಕು ದೂಡುತ್ತಿರುವ ಈ ನಿರಾಶ್ರಿತರು ಮುಂಬರುವ ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳು ಹರಡಬಹುದಾದ ಹಿನ್ನೆಲೆಯಲ್ಲಿ ತಮ್ಮ ಜೀವಗಳು ಮತ್ತು ಆರೋಗ್ಯಕ್ಕೆ ಹೆಚ್ಚಿನ ಅಪಾಯವನ್ನು ಎದುರಿಸುತ್ತಿದ್ದಾರೆ ಎಂದು ಅದು ಹೇಳಿದೆ.
ಢಾಕಾದಲ್ಲಿ ಸಹಭಾಗಿಗಳ ಸಭೆಯಲ್ಲಿ ಮಾತನಾಡಿದ ಡಬ್ಲೂಎಚ್‌ಒದ ಆಗ್ನೇಯ ಏಷ್ಯಾ ಪ್ರಾದೇಶಿಕ ನಿರ್ದೇಶಕಿ ಪೂನಂ ಖೇತ್ರಪಾಲ್ ಸಿಂಗ್ ಅವರು, ಇದು ಇತ್ತೀಚಿನ ಸಮಯಗಳಲ್ಲಿಯ ಬೃಹತ್ ಮಾನವೀಯ ಬಿಕ್ಕಟ್ಟುಗಳ ಲ್ಲೊಂದಾಗಿದೆ ಎಂದು ತಿಳಿಸಿದರು.
ಇಷ್ಟೊಂದು ದೊಡ್ಡ ನಿರಾಶ್ರಿತರ ಗುಂಪಿಗೆ ಭಾರೀ ಪ್ರಮಾಣದಲ್ಲಿ ವೈದ್ಯಕೀಯ ಅಗತ್ಯಗಳನ್ನು ಪೂರೈಸಲು ಯಾವುದೇ ಒಂದು ಸಂಸ್ಥೆಗೆ ಅಥವಾ ಬಾಂಗ್ಲಾದೇಶ ಸರಕಾರವೊಂದಕ್ಕೇ ಸಾಧ್ಯವಾಗುವುದಿಲ್ಲ. ಚಂಡಮಾರುತಗಳಿಗೆ ಮತ್ತು ನೆರೆಹಾವಳಿಗಳಿಗೆ ಸುಲಭವಾಗಿ ಗುರಿಯಾಗಬಲ್ಲ ಪ್ರದೇಶದಲ್ಲಿ ರೊಹಿಂಗ್ಯಾಗಳು ವಾಸವಾಗಿದ್ದಾರೆ. ಇಂತಹ ಸ್ಥಿತಿಗಳಲ್ಲಿ ಜೀವಕ್ಕೆ ಅಪಾಯವನ್ನುಂಟು ಮಾಡುವ ನೀರಿನಿಂದ ಮತ್ತು ವೈರಾಣಗಳಿಂದ ಉಂಟಾಗುವ ರೋಗಗಳು ಹರಡುವ ಹೆಚ್ಚಿನ ಅಪಾಯವಿದೆ ಎಂದು ಅವರು ಹೇಳಿದರು.
ಮುನ್ನೆಚ್ಚರಿಕೆ ಕ್ರಮವಾಗಿ ಎಪ್ರಿಲ್‌ನಲ್ಲಿ ಇನ್ನೊಂದು ಸುತ್ತಿನ ಕಾಲರಾ ಮತ್ತು ದಡಾರ ಲಸಿಕೆ ಕಾರ್ಯಕ್ರಮವನ್ನು ಈ ನಿರಾಶ್ರಿತರಿಗಾಗಿ ನಡೆಸಲಾಗುವುದು. ಈ ಹಿಂದೆ ನಿರಾಶ್ರಿತರಿಗೆ 900,000 ಡೋಸ್ ಕಾಲರಾ ಲಸಿಕೆಯನ್ನು ನೀಡಲಾಗಿದೆ. ಇದರ ಜೊತಗೆ ದಡಾರಕ್ಕಾಗಿ ಎರಡು ಮತ್ತು ಡಿಫ್ತೀರಿಯಾಕ್ಕಾಗಿ ಮೂರು ಲಸಿಕೆ ಕಾರ್ಯಕ್ರಮಗಳನ್ನು ನಡೆಸಲಾಗಿದ್ದು, ಈವಾರದ ಪೂರ್ವಾರ್ಧದಲ್ಲಿ ಅವು ಪೂರ್ಣಗೊಂಡಿವೆ ಎಂದು ಡಬ್ಲೂಎಚ್‌ಒ ಹೇಳಿಕೆಯಲ್ಲಿ ತಿಳಿಸಿದೆ.







