ತೆರಿಗೆ ಬಾಕಿಯುಳಿಸಿದವರ ಹೆಸರು ಬಹಿರಂಗಗೊಳಿಸಿದ ಐಟಿ ಇಲಾಖೆ
‘ಇದು ಅವಮಾನಿಸುವ ನೀತಿ’!

ಹೊಸದಿಲ್ಲಿ,ಮಾ.29: 490 ಕೋ.ರೂ.ಗಳ ಆದಾಯ ತೆರಿಗೆಯನ್ನು ಬಾಕಿಯುಳಿಸಿ ತಲೆಮರೆಸಿಕೊಂಡಿರುವ ಅಥವಾ ಬಾಕಿಯನ್ನು ತೀರಿಸಲು ಸಾಕಷ್ಟು ಆಸ್ತಿಯಿಲ್ಲ ಎಂದು ಹೇಳಿಕೊಂಡಿರುವ ದೇಶಾದ್ಯಂತದ 24 ಸುಸ್ತಿದಾರರ ಹೆಸರುಗಳನ್ನು ಆದಾಯ ತೆರಿಗೆ ಇಲಾಖೆಯು ಗುರುವಾರ ಬಹಿರಂಗಗೊಳಿಸಿದೆ.
ಸುಸ್ತಿದಾರರನ್ನು ಹೆಸರಿಸಿ ಅವರನ್ನು ಅವಮಾನಿಸುವ ತನ್ನ ನೀತಿಯ ಅಂಗವಾಗಿ ಇಲಾಖೆಯು ರಾಷ್ಟ್ರೀಯ ದಿನಪತ್ರಿಕೆಗಳಲ್ಲಿ ಅಂತಹ ಸುಸ್ತಿದಾರರ ಪಟ್ಟಿಯನ್ನೊಳಗೊಂಡಿರುವ ಜಾಹೀರಾತುಗಳನ್ನು ಪ್ರಕಟಿಸಿದೆ. ತಮ್ಮ ತೆರಿಗೆ ಬಾಕಿಗಳನ್ನು ತಕ್ಷಣವೇ ಪಾವತಿಸುವಂತೆ ಈ ಜಾಹೀರಾತಿನಲ್ಲಿ ಸುಸ್ತಿದಾರರಿಗೆ ಸೂಚಿಸಲಾಗಿದೆ.
ಸುಸ್ತಿದಾರ ಸಂಸ್ಥೆಗಳು ಅಥವಾ ವ್ಯಕ್ತಿಗಳ ಗುರುತುಗಳು, ನಿರ್ದೇಶಕರು ಮತ್ತು ಪಾಲುದಾರರ ಹೆಸರುಗಳು, ವಿಳಾಸ ಮತ್ತು ಬಾಕಿಯಿರುವ ತೆರಿಗೆ ಇತ್ಯಾದಿ ವಿವರಗಳನ್ನು ಈ ಜಾಹೀರಾತು ಒಳಗೊಂಡಿದೆ.
ಈ ಸುಸ್ತಿದಾರ ಸಂಸ್ಥೆಗಳು ಆಹಾರ ಸಂಸ್ಕರಣೆ, ಚಿನ್ನ-ಬೆಳ್ಳಿ ವ್ಯಾಪಾರ, ಸಾಫ್ಟ್‌ವೇರ್, ಮದ್ಯ ತಯಾರಿಕೆಯಂತಹ ಕ್ಷೇತ್ರಗಳಲ್ಲಿ ತೊಡಗಿಕೊಂಡಿದ್ದವು.
86.27 ಕೋ.ರೂ.ಗಳ ಗರಿಷ್ಠ ಬಾಕಿಯು ದಿಲ್ಲಿಯ ಸ್ಟಾಕ್ ಗುರು ಕಂಪನಿ ಮತ್ತು ಅದರ ಪಾಲುದಾರ ಲೋಕೇಶ್ವರ ದೇವ್ ಹೆಸರಿನಲ್ಲಿದ್ದು, ತೆರಿಗೆದಾರ ತಲೆಮರೆಸಿಕೊಂಡಿದ್ದಾನೆ ಮತ್ತು ತೆರಿಗೆ ಪಾವತಿಗೆ ಸಾಕಷ್ಟು ಆಸ್ತಿಯನ್ನು ಹೊಂದಿಲ್ಲ ಎಂದು ಜಾಹೀರಾತು ರೂಪದ ನೋಟಿಸ್‌ನಲ್ಲಿ ಹೇಳಲಾಗಿದೆ. ಈ ಕಂಪನಿಯು 2009-10 ಮತ್ತು 2010-11ನೇ ಸಾಲಿ ನಿಂದಲೂ ತೆರಿಗೆಯನ್ನು ಬಾಕಿಯುಳಿಸಿಕೊಂಡಿದೆ. ಕೆಲವು ಸುಸ್ತಿದಾರರು 1989-90ನೇ ಸಾಲಿಗೆ ಪಾವತಿಸಬೇಕಿದ್ದ ತೆರಿಗೆಯನ್ನೂ ಬಾಕಿಯುಳಿಸಿದ್ದಾರೆ.
ಕೋಲ್ಕತಾದ ಅರ್ಜುನ ಸೋಂಕರ್ ಎಂಬಾತ 51.37 ಕೋ.ರೂ. ಮತ್ತು ಕಿಶನ್ ಶರ್ಮಾ ಎಂಬಾತ 47.52 ಕೋ.ರೂ.ತೆರಿಗೆ ಬಾಕಿಯುಳಿಸಿದ್ದು, ಇಬ್ಬರೂ ತಲೆಮರೆಸಿ ಕೊಂಡಿದ್ದಾರೆ.
ಅಹ್ಮದಾಬಾದ್, ಗುವಾಹಟಿ, ವಿಜಯವಾಡಾ, ನಾಸಿಕ್, ಸೂರತ್, ದಿಲ್ಲಿ, ವಡೋದರಾ, ಕೋಲ್ಕತಾದಂತಹ ನಗರಗಳ 24 ಸುಸ್ತಿದಾರರು ಈ ಪಟ್ಟಿಯಲ್ಲಿದ್ದಾರೆ.
ಸುಸ್ತಿದಾರರ ಕುರಿತು ಯಾವುದೇ ಮಾಹಿತಿಯದ್ದಲ್ಲಿ ಅವರನ್ನು ಪತ್ತೆ ಹಚ್ಚಲು ನೆರವಾಗುವಂತೆ ಜನರಲ್ಲಿ ಅರಿವು ಮೂಡಿಸಲು ಈ ಜಾಹೀರಾತನ್ನು ಪ್ರಕಟಿಸಲಾಗಿದೆ ಎಂದು ಹಿರಿಯ ಆದಾಯ ತೆರಿಗೆ ಅಧಿಕಾರಿಯೋರ್ವರು ತಿಳಿಸಿದರು.
ಇಲಾಖೆಯು ಕಳೆದ ಕೆಲವು ವರ್ಷಗಳಲ್ಲಿ ಇಂತಹ 96 ಸುಸ್ತಿದಾರ ಕಂಪನಿಗಳ ಹೆಸರುಗಳನ್ನು ಬಹಿರಂಗಗೊಳಿಸಿದೆ.







