ಉಡುಪಿ ನಗರಸಭೆ: ಸಭೆ ಸಮಾರಂಭಕ್ಕೆ ಅನುಮತಿ ಕಡ್ಡಾಯ
ಉಡುಪಿ, ಮಾ.29: ರಾಜ್ಯ ವಿಧಾನಸಭಾ ಚುನಾವಣಾ ಹಿನ್ನಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಜ್ಯಾರಿಯಾಗಿರುವುದರಿಂದ ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಖಾಸಗಿ ಸಭೆ, ಸಮಾರಂಭ, ಮೆರವಣಿಗೆ ನಡೆಸುವ ಮುಂಚಿತವಾಗಿ ಚುನಾವಣಾಧಿಕಾರಿ ಹಾಗೂ ಸಂಬಂಧಿಸಿದ ಪೊಲೀಸ್ ಠಾಣೆಗಳಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ.
ಒಂದು ವೇಳೆ ಈಗಾಗಲೇ ನಗರಸಭೆಯಿಂದ ಅನುಮತಿ ಪಡೆದಿದ್ದಲ್ಲಿ ಈ ಅನುಮತಿ ಪತ್ರದೊಂದಿಗೆ ಸಂಬಂಧಪಟ್ಟವರಿಂದ ಮತ್ತೆ ಅನುಮತಿ ಪಡೆಯಬೇಕು. ಖಾಸಗಿ ಗೋಡೆ ಇತ್ಯಾದಿಗಳ ಮೇಲೆ ಯಾವುದೇ ರೀತಿಯ ಚುನಾವಣಾ ಗೋಡೆ ಬರಹ ಹಾಗೂ ಚುನಾವಣಾ ಘೋಷಣೆಗಳನ್ನು ಬರೆದಿದ್ದಲ್ಲಿ ಕೂಡಲೇ ತೆರವುಗೊಳಿಸಬೇಕು. ತಪ್ಪಿದ್ದಲ್ಲಿ ಕರ್ನಾಟಕ ಮುಕ್ತ ಪ್ರದೇಶ ವಿರೂಪಗೊಳಿಸುವ ವಿರುದ್ಧ ಕಾನೂನಿಂತೆ ಕ್ರಮ ಕೈಗೊಳ್ಳಲಾಗುವುದು.
ರಸ್ತೆ ಬದಿಗಳಲ್ಲಿ ಮತ್ತು ಖಾಸಗಿ ಜಮೀನುಗಳಲ್ಲಿ ಯಾವುದೇ ಬ್ಯಾನರ್ ಹಾಗೂ ಬಂಟಿಂಗ್ಸ್ ಹಾಕಲು ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯ ಬೇಕು. ತಪ್ಪಿದ್ದಲ್ಲಿ ಯಾವುದೇ ಮುನ್ಸೂಚನೆ ನೀಡದೆ ನಗರಸಭಾ ವತಿಯಿಂದ ತೆರವುಗೊಳಿಸಲಾಗುವುದು ಎಂದು ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





