ಏರ್‌ಫೋರ್ಸ್ ಕೇಂದ್ರಕ್ಕೆ ಭೂಸ್ವಾಧೀನ ಮಾಡಿದ್ದ ಜಮೀನು ಹಿಂದಿರುಗಿಸಲು ಹೈಕೋರ್ಟ್ ನಕಾರ

ಬೆಂಗಳೂರು, ಮಾ.29: ಜಾಲಹಳ್ಳಿ ಏರ್‌ಫೋರ್ಸ್ ಕೇಂದ್ರಕ್ಕೆ ಭೂಸ್ವಾಧೀನ ಮಾಡಿದ್ದ ಜಮೀನನ್ನು ಮೂರು ದಶಕದ ಬಳಿಕ ವಾಪಸ್ ನೀಡುವಂತೆ ಭೂಮಾಲಕ ಮಾಡಿದ್ದ ಮವಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.
ಪೀಣ್ಯ ಗ್ರಾಮಕ್ಕೆ ಸೇರಿದ್ದ 5.20 ಎಕರೆಯು ಜಾಲಹಳ್ಳಿ ವಾಯುಪಡೆಗೆ 1986ರಲ್ಲಿ ಭೂಸ್ವಾಧೀನವಾಗಿತ್ತು. ಇದಕ್ಕಾಗಿ ಭೂಮಾಲಕ ರಾಧಾಕೃಷ್ಣಮೂರ್ತಿಗೆ ಅಂದೇ ಪರಿಹಾರವನ್ನು ನೀಡಲಾಗಿತ್ತು. ಆದರೆ, ಆ ಭೂಮಿಯನ್ನು ಬಳಕೆ ಮಾಡಿಕೊಳ್ಳದ ಕಾರಣ ಜಮೀನು ವಾಪಸ್ ನೀಡುವಂತೆ ಭೂಮಾಲಕ ನ್ಯಾಯಾಲಯದ ಮೊರೆ ಹೋಗಿದ್ದರು. ವಿಚಾರಣೆ ವೇಳೆ ಕೋರ್ಟ್, ವಾಯುಪಡೆ ಹಾಗೂ ಬಿಡಿಎಗೆ ನೋಟಿಸ್ ನೀಡಿ ಸಮಜಾಯಿಷಿ ಕೇಳಿತ್ತು. ಇದಕ್ಕೆ ಎರಡೂ ಕಡೆಯಿಂದ ಲಿಖಿತವಾಗಿ ಹೇಳಿಕೆ ನೀಡಲಾಗಿದೆ. ಬಿಡಿಎ ಸಲ್ಲಿಸಿದ್ದ ಪ್ರಮಾಣಪತ್ರದಲ್ಲಿ ಸ್ವಾಧೀನ ಮಾಡಿಕೊಂಡಿದ್ದ ಜಮೀನಿಗೆ ಈ ಮೊದಲು ಪರಿಹಾರ ವಿತರಿಸಲಾಗಿದೆ. ಹೀಗಾಗಿ ತಾನು ವಶಕ್ಕೆ ಪಡೆಯಲಿರುವ ಜಮೀನಿನ ವ್ಯಾಜ್ಯ ವಾಯುಪಡೆಯೊಂದಿಗೆ ಇರಲಿದೆ ಎಂದು ಹೇಳಿತ್ತು.
ಇದನ್ನು ಪುರಸ್ಕರಿಸಿದ ಕೋರ್ಟ್ ಭೂಮಾಲಕರ ಪ್ರಸ್ತಾಪವನ್ನು ತಿರಸ್ಕರಿಸಿದೆ. ಅರ್ಜಿ ವಿಲೇವಾರಿ ವೇಳೆ ಕೋರ್ಟ್ ಭೂಮಾಲಕನಿಂದ ಜಮೀನು ಸ್ವಾಧೀನ ಪಡಿಸಿಕೊಂಡ ಬಳಿಕ ಪರಿಹಾರ ನೀಡಬೇಕು. ಇದನ್ನು ಪಡೆದಿದ್ದರೆ ಭೂಮಿಯನ್ನು ವಾಪಸ್ ನೀಡಲಾಗದು. ಆದರೆ, ಆ ಭೂಮಿ ಬಳಕೆ ಮಾಡಿಕೊಳ್ಳದಿದ್ದರೆ, ಕೆಲವೊಮ್ಮೆ ಹಿಂದಿರಿಗಿಸುವ ಸಾಧ್ಯತೆ ಇದೆ. ಸದರಿ ಪ್ರಕರಣದಲ್ಲಿ ವಾಯುಪಡೆಯ ಅಧಿಕಾರಿಗಳ ವಸತಿಗೆ ಜಾಗ ಬಳಸಿಕೊಂಡು ಇನ್ನೂ ಸ್ವಲ್ಪ ಭಾಗವನ್ನು ಉಳಿಸಿಕೊಂಡಿದ್ದರೂ, ಅದನ್ನು ಭೂಮಾಲಕನಿಗೆ ನೀಡಲಾಗದು ಎಂದು ಸ್ಪಷ್ಟಪಡಿಸಿದೆ.







