ಪಿಂಚಣಿ ಪ್ರೋತ್ಸಾಹ ಯೋಜನೆಯಿಂದ 1 ಕೋಟಿ ಉದ್ಯೋಗ ಸೃಷ್ಟಿ : ಸರಕಾರದ ನಿರೀಕ್ಷೆ

ಹೊಸದಿಲ್ಲಿ, ಮಾ.29: ಆರಂಭದ ಮೂರು ವರ್ಷಗಳಲ್ಲಿ ಹೊಸ ಉದ್ಯೋಗಿಗಳ ಮೂಲ ವೇತನದ ಮೇಲಿನ ಶೇ.12ರಷ್ಟು ಪಿಂಚಣಿ ಕೊಡುಗೆಯನ್ನು ಭರಿಸುವ ಕೇಂದ್ರ ಸರಕಾರದ ಘೋಷಣೆಯಿಂದ ಸುಮಾರು 1 ಕೋಟಿಯಷ್ಟು ಹೊಸ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಸರಕಾರ ನಿರೀಕ್ಷಿಸಿದೆ.
ಹೊಸ ಸಿಬ್ಬಂದಿಗಳ ಮೂಲವೇತನದ ಮೇಲಿನ ಶೇ.12ರಷ್ಟು ಪಿಂಚಣಿ ಪಾವತಿಸುವ ಪ್ರಸ್ತಾವಕ್ಕೆ ಪ್ರಧಾನಿ ಮೋದಿ ಅಧ್ಯಕ್ಷತೆಯ ಆರ್ಥಿಕ ವ್ಯವಹಾರದ ಸಂಸದೀಯ ಸಮಿತಿ ಬುಧವಾರ ಅನುಮೋದನೆ ನೀಡಿದೆ.
ಕೇಂದ್ರ ಸರಕಾರ ಉದ್ಯೋಗ ಸೃಷ್ಟಿಸಲು ಬದ್ಧವಾಗಿದೆ. 2016ರಲ್ಲಿ ಅನುಷ್ಠಾನಕ್ಕೆ ಬಂದ ಯೋಜನೆಯಲ್ಲಿ ಸರಕಾರ ಉದ್ಯೋಗದಾತರು ಪಾವತಿಸಬೇಕಾದ ಪಿಂಚಣಿಯ ಮೊತ್ತದಲ್ಲಿ ಶೇ.8.33ರಷ್ಟನ್ನು ಭರಿಸುವ ವ್ಯವಸ್ಥೆಯಿತ್ತು. ಇದೀಗ ಈ ಯೋಜನೆಯ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಲಾಗಿದೆ. ಉಡುಪು, ಗಾರ್ಮೆಂಟ್ಸ್ ಹಾಗೂ ಟೆಕ್ಸ್‌ಟೈಲ್ ವಿಭಾಗದಲ್ಲಿ ಉದ್ಯೋಗದಾತರು ಪಾವತಿಸಬೇಕಿರುವ ಸಂಪೂರ್ಣ ಶೇ.12ರಷ್ಟು ಮೊತ್ತವನ್ನು ಸರಕಾರವೇ ಪಾವತಿಸಲಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಕುಮಾರ್ ಗಂಗ್ವಾರ್ ತಿಳಿಸಿದ್ದಾರೆ.
2016ರಲ್ಲಿ ಆರಂಭಿಸಲಾದ ‘ಪ್ರಧಾನಮಂತ್ರಿ ಉದ್ಯೋಗ ಪ್ರೋತ್ಸಾಹ ಯೋಜನೆ’ಯಿಂದ ಸುಮಾರು 30 ಲಕ್ಷದಷ್ಟು ಕಾರ್ಮಿಕರು ಪ್ರಯೋಜನ ಪಡೆದಿದ್ದಾರೆ. ಈ ಯೋಜನೆಯಡಿ 6,500ರಿಂದ 10,000 ಕೋಟಿ ರೂ. ಮೊತ್ತದ ಅನುದಾನವನ್ನು ಬಜೆಟ್‌ನಲ್ಲಿ ನಿಗದಿಗೊಳಿಸಲಾಗಿದೆ. ಈಗಾಗಲೇ ಶೇ.8.33ರ ವಿಭಾಗದಡಿ ಪಿಂಚಣಿ ಪ್ರಯೋಜನ ಪಡೆಯುವ ಉದ್ಯೋಗಿಗಳನ್ನು ಶೇ.12ರ ವಿಭಾಗಕ್ಕೆ ಸೇರಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
2016ರ ಎಪ್ರಿಲ್ 1ರ ಬಳಿಕ ಕೆಲಸಕ್ಕೆ ಸೇರಿದ, ತಿಂಗಳಿಗೆ 15,000 ರೂ.ಗಿಂತ ಕಡಿಮೆ ವೇತನ ಇರುವ , ಹೊಸ ಯುಎಎನ್ ನಂಬರ್ ಹೊಂದಿರುವ ಉದ್ಯೋಗಿಗಳು ಈ ಯೋಜನೆಯ ಪ್ರಯೋಜನ ಪಡೆಯುತ್ತಾರೆ.







