ಸರಕಾರದ ಹಸ್ತಕ್ಷೇಪ ಬಗ್ಗೆ ಇಡೀ ನ್ಯಾಯಾಲಯವೇ ಚರ್ಚೆ ನಡೆಸಲಿ
ಮುಖ್ಯ ನ್ಯಾಯಾಧೀಶರಿಗೆ ನ್ಯಾ. ಚೆಲಮೇಶ್ವರ್ ಪತ್ರ

ಹೊಸದಿಲ್ಲಿ, ಮಾ.29: ಸರ್ವೋಚ್ಚ ನ್ಯಾಯಾಲಯದ ಅತ್ಯಂತ ಹಿರಿಯ ನ್ಯಾಯಾಧೀಶ ಜಸ್ತಿ ಚೆಲಮೇಶ್ವರ್ ಕಳೆದ ವಾರ ಭಾರತದ ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾಗೆ ಪತ್ರ ಬರೆದಿದ್ದು, ಉಚ್ಚ ನ್ಯಾಯಾಲಯಗಳಿಗೆ ನ್ಯಾಯಾಧೀಶರ ನೇಮಕದಲ್ಲಿ ಸರಕಾರದ ಹಸ್ತಕ್ಷೇಪ ಕುರಿತು ಸಂಪೂರ್ಣ ನ್ಯಾಯಾಲಯವು ನ್ಯಾಯಾಂಗದ ಪರವಾಗಿ ಚರ್ಚೆ ನಡೆಸಲಿ ಎಂದು ಮನವಿ ಮಾಡಿದ್ದಾರೆ. ಈ ಪತ್ರಕ್ಕೆ ಸಿಜೆಐ ಇನ್ನಷ್ಟೇ ಪ್ರತಿಕ್ರಿಯೆ ನೀಡಬೇಕಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಐದು ಪುಟಗಳ ಪತ್ರದ ಪ್ರತಿಯನ್ನು ಸರ್ವೋಚ್ಚ ನ್ಯಾಯಾಲಯದ ಇತರ 22 ನ್ಯಾಯಾಧೀಶರಿಗೂ ನೀಡಲಾಗಿದೆ. ಜನವರಿ 12ರಂದು ಸುಪ್ರೀಂ ಕೋರ್ಟ್‌ನ ಹಿರಿಯ ನ್ಯಾಯಾಧೀಶರಾದ ರಂಜನ್ ಗೊಗೊಯಿ, ಚೆಲಮೇಶ್ವರ್, ಮದನ್ ಬಿ. ಲೊಕೂರ್ ಹಾಗೂ ಕುರಿಯನ್ ಜೋಸೆಫ್ ಸಿಜೆಐ ನಡೆಯನ್ನು ವಿರೋಧಿಸಿ ಪತ್ರಿಕಾಗೋಷ್ಟಿ ಕರೆದಾಗ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಶ್ರೇಷ್ಟ ನ್ಯಾಯಾಲಯದ ಕೆಲವು ನ್ಯಾಯಾಧೀಶರು ಆರೋಪಿಸಿದ್ದರು. ಈ ಬಾರಿ ಅಂಥ ಆರೋಪಗಳು ಎದುರಾಗದಂತೆ ಎಚ್ಚರವಹಿಸಿರುವ ಚೆಲಮೇಶ್ವರ್ ತಾವು ಬರೆದ ಪತ್ರದ ಪ್ರತಿಗಳನ್ನು ಎಲ್ಲ ನ್ಯಾಯಾಧೀಶರಿಗೂ ರವಾನಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.
ಉಚ್ಚ ನ್ಯಾಯಾಲಯಗಳಿಗೆ ನ್ಯಾಯಾಧೀಶರನ್ನು ಆಯ್ಕೆ ಮಾಡುವ ವಿಷಯದಲ್ಲಿ ಸುಪ್ರೀಂ ಕೋರ್ಟ್ ಮಂಡಳಿಯ ಸಲಹೆಯನ್ನು ಸ್ವೀಕರಿಸುವಲ್ಲಿ ಸರಕಾರ ಆಯ್ದು ತೆಗೆಯುವ ಕ್ರಮವನ್ನು ಅನುಸರಿಸುತ್ತಿದೆ ಎಂದು ಚೆಲಮೇಶ್ವರ್ ಮಾರ್ಚ್ 21ರಂದು ಮುಖ್ಯ ನ್ಯಾಯಾಧೀಶರಿಗೆ ಬರೆದ ಪತ್ರದಲ್ಲಿ ಆರೋಪಿಸಿದ್ದಾರೆ. ತನಗೆ ಸರಿಕಾಣದ ಹೆಸರುಗಳನ್ನು ಸರಕಾರವು ನಿರ್ಲಕ್ಷಿಸುತ್ತದೆ ಅಥವಾ ಮುಂದೂಡುತ್ತದೆ. ಇದರಿಂದ ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತದೆ ಎಂದು ಅವರು ಪತ್ರದಲ್ಲಿ ಆರೋಪಿಸಿದ್ದಾರೆ. ಸಿಜೆಐ ವಿರುದ್ಧ ರಾಜ್ಯಸಭೆಯಲ್ಲಿ ವಿಪಕ್ಷಗಳು ದೋಷಾರೋಪ ನಿರ್ಣಯ ಮಂಡಿಸಲು ಸಿದ್ಧತೆ ನಡೆಸುತ್ತಿರುವ ಸಂದರ್ಭದಲ್ಲಿ ಇಡೀ ನ್ಯಾಯಾಲಯ ಚರ್ಚೆಯಲ್ಲಿ ಭಾಗವಹಿಸಬೇಕೆಂಬ ಆಗ್ರಹವನ್ನು ಮಾಡಿರುವುದು ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ ಮೇಲೆ ಹೆಚ್ಚಿನ ಒತ್ತಡವನ್ನು ಹೇರಿದೆ. ಕಾನೂನು ಸಚಿವರು ನನಗೆ ನೇರವಾಗಿ ಪತ್ರ ಬರೆದಿದ್ದಾರೆ ಎಂಬ ಅಂಶವನ್ನು ಉಲ್ಲೇಖಿಸಿ ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ದಿನೇಶ್ ಮಹೇಶ್ವರಿ ಈ ತಿಂಗಳ ಆರಂಭದಲ್ಲಿ ಬರೆದಿರುವ ಪತ್ರದ ಹಿನ್ನೆಲೆಯಲ್ಲಿ ಚೆಲಮೇಶ್ವರ್ ಪತ್ರವು ಮಹತ್ವವನ್ನು ಪಡೆದುಕೊಂಡಿದೆ. ಕಾನೂನು ಸಚಿವರ ಪತ್ರದ ಪರಿಣಾಮವಾಗಿ, ಸರ್ವೋಚ್ಚ ನ್ಯಾಯಾಲಯ ಮಂಡಳಿಯ ಪುನರುಚ್ಛರಿಸಿದ ನಂತರವೂ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಪಿ. ಕೃಷ್ಣ ಭಟ್‌ರನ್ನು ಹೈಕೋರ್ಟ್‌ಗೆ ನೇಮಕ ಮಾಡುವ ಪ್ರಕ್ರಿಯೆಗೆ ತಡೆಯೊಡ್ಡಿತ್ತು ಎಂದು ಮಹೇಶ್ವರಿ ಆರೋಪಿಸಿದ್ದರು.
ಸುಪ್ರೀಂ ಕೋರ್ಟ್ ಕೊಲಿಜಿಯಂ ಒಂದು ಹೆಸರನ್ನು ಪುನರುಚ್ಚರಿಸಿದರೆ ಆ ವ್ಯಕ್ತಿಯನ್ನು ಹೈಕೋರ್ಟ್‌ಗೆ ನೇಮಕ ಮಾಡುವುದು ಕಾನೂನು ಸಚಿವಾಲಯದ ಜವಾಬ್ದಾರಿಯಾಗಿದೆ. ಕಾನೂನು ಸಚಿವಾಲಯದ ಸೂಚನೆ ಮೇರೆಗೆ, ನ್ಯಾಯಾಧೀಶ ಕೃಷ್ಣ ಭಟ್ ಅವರ ವಿರುದ್ಧದ ಪ್ರಕರಣಕ್ಕೆ ಮರುಜೀವ ನೀಡಿದ ನ್ಯಾಯಾಧೀಶ ಮಹೇಶ್ವರಿಯವರ ನಿರ್ಧಾರವನ್ನು ಚೆಲಮೇಶ್ವರ್ ತಮ್ಮ ಪತ್ರದಲ್ಲಿ ಕಟುವಾಗಿ ಟೀಕಿಸಿದ್ದಾರೆ. 2017ರಲ್ಲೇ ಈ ಪ್ರಕರಣದಲ್ಲಿ ಯಾವುದೇ ಹುರುಳಿಲ್ಲ ಮತ್ತು ಈ ಆಪಾದನೆಗಳನ್ನು ಭಟ್ ಅವರ ಹೆಸರಿಗೆ ಚ್ಯುತಿ ತರಲು ಮಾಡಲಾಗಿದೆ ಎಂದು ಸಾಬೀತಾಗಿದ್ದರೂ ಪತ್ತೆ ಪ್ರಕರಣವನ್ನು ಕೆದಕುವ ಅಗತ್ಯವಿರಲಿಲ್ಲ ಎಂದು ಚೆಲಮೇಶ್ವರ್ ತಿಳಿಸಿದ್ದಾರೆ.







