ನಕಲಿ ಅಂಕಪಟ್ಟಿ ನೀಡಿರುವುದಾಗಿ ಆರೋಪಿಸಿ ದೂರು: ಪ್ರಕರಣ ದಾಖಲು
ಬೆಳ್ತಂಗಡಿ, ಮಾ. 29: ಬೆಳ್ತಂಗಡಿ ನಗರ ವ್ಯಾಪ್ತಿಯಲ್ಲಿ ಇರುವ ಖಾಸಗಿ ಟ್ರೈನಿಂಗ್ ಕಾಲೇಜ್‌ನಲ್ಲಿ ಶಿಕ್ಷಣ ನೀಡುವ ನೆಪದಲ್ಲಿ ಅಧಿಕ ಹಣವನ್ನು ಪಡೆದು ನಕಲಿ ಸರ್ಟಿಫಿಕೆಟ್ ನೀಡಲಾಗುತ್ತಿದೆ ಎಂದು ಆರೋಪಿಸಿ ಸವಣಾಲು ಕಪ್ರೊಟ್ಟು ನಿವಾಸಿ ಸುಮಲತಾ ಎಂಬವರು ಗುರುವಾರ ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದು ಈ ಬಗ್ಗೆ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.
ಇಲ್ಲಿನ ಟ್ರೈನಿಂಗ್ ಕಾಲೇಜಿನಲ್ಲಿ 2014ರ ಜುಲೈ ಯಲ್ಲಿ ಒಂದು ವರ್ಷದ ಫ್ಯಾಶನ್ ಡಿಸೈನ್ ಪಡೆದಿದ್ದು ಅದಕ್ಕೆ ಅಂಕ ಪಟ್ಟಿ ಹಾಗೂ ಪ್ರಮಾಣ ಪತ್ರ ನೀಡಿರುತ್ತಾರೆ. ಅಲ್ಲದೆ ಸಂಸ್ಥೆಯವರು ಎಂ.ಬಿ.ಎ ಕೋರ್ಸ್ ಮಾಡುವಂತೆ ತಿಳಿಸಿ ಅದಕ್ಕೆ 60 ಸಾವಿರ ಶುಲ್ಕ ಪಡೆದಿದ್ದು, 2016ರಲ್ಲಿ ಇದಕ್ಕೆ ಅಂಕಪಟ್ಟಿ ನೀಡಿದ್ದಾರೆ. ಆದರೆ ಈ ಸಂಸ್ಥೆಯವರು ನೀಡಿದ ಅಂಕಪಟ್ಟಿ ಯಾವುದೇ ಸರಕಾರದ ಮಾನ್ಯತೆ ಯೊಂದಿದ ಸಂಸ್ಥೆಯ ಅಂಕಪಟ್ಟಿಯಾಗಿರದೇ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಬ್ಯುಸಿನೆಸ್ ಮ್ಯಾನೆಜ್‌ಮೆಂಟ್ ಆ್ಯಂಡ್ ಸ್ಟಡಿಸ್, ಇಂಡಿಯನ್ ಬೋರ್ಡ್ ಆಫ್ ಎಕ್ಸಾಮಿನೇಷನ್ ಎಂಪ್ಲಾಯ್ಮೆಂಟ್ ಆಂಡ್ ಟ್ರೈನಿಂಗ್ ಜೆಪಿ ನಗರ ಬೆಂಗಳೂರು ಎಂಬ ಹೆಸರಿನ ಅಂಕಪಟ್ಟಿ ಸಿದ್ಧಪಡಿಸಿ ನೀಡುತ್ತಿರುವುದಲ್ಲದೆ ಇಂಡಿಯನ್ ಟೆಕ್ನಿಕಲ್ ಎಜುಕೇಶನಲ್ ಸೊಸೈಟಿ ಮುಂಬೈ ಎಂಬ ಹೆಸರಿನಲ್ಲಿ ನೀಡಿದ್ದಾರೆ ಎಂದು ಆರೋಪಿಸಿ ಸುಮಲತಾ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಸಂಸ್ಥೆಗೆ ಸಂಬಂಧ ಪಟ್ಟ ತಲ್‌ಹತ್, ಮುನಿರಾ ಕೆ., ಅಶ್ರಫ್ ಆಲಿ ಎಂಬವರ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಂಡಿಯನ್ ಟೆಕ್ನಿಕಲ್ ಎಜುಕೇಶನಲ್ ಸೊಸೈಟಿ ಮುಂಬೈಈ ಸಂಸ್ಥೆಯೊಂದಿಗೆ ನಮ್ಮ ಸಂಸ್ಥೆ ಒಪ್ಪಂದವಿದ್ದು ಅದರ ಪ್ರಕಾರ ಪ್ರಮಾಣ ಪತ್ರ ನೀಡುತ್ತಿದ್ದೇವೆ ಎಂದು ಸಂಸ್ಥೆಯ ಮುಖ್ಯಸ್ಥ ತಲ್‌ಹತ್ ತಿಳಿಸಿದ್ದಾರೆ.





