ಮಡಿಕೇರಿ: ಕಾಡಾನೆ ಸಂಶಯಾಸ್ಪದ ಸಾವು

ಮಡಿಕೇರಿ, ಮಾ.29: ಅಂದಾಜು 30 ವರ್ಷ ಪ್ರಾಯದ ಗಂಡಾನೆಯೊಂದು ಸಂಶಯಾಸ್ಪದವಾಗಿ ಸಾವಿಗೀಡಾಗಿರುವ ಘಟನೆ ಇಲ್ಲಿಗೆ ಸಮೀಪದ ಪಾಲಂಗಾಲ ಗ್ರಾಮದಲ್ಲಿ ನಡೆದಿದೆ.
ಕೆದಮಳ್ಳೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಾಲಂಗಾಲ ಗ್ರಾಮದಲ್ಲಿರುವ ಕೋಡಿರ ಪ್ರವೀಣ್ ಎಂಬವರಿಗೆ ಸೇರಿದ ಕಾಫಿ ತೋಟದಲ್ಲಿ ಗುರುವಾರ ಪೂರ್ವಾಹ್ನ 9 ಗಂಟೆ ವೇಳೆಗೆ ಸತ್ತುಬಿದ್ದಿದ್ದ ಕಾಡಾನೆಯ ಶವವನ್ನು ಕಾರ್ಮಿಕರು ಗಮನಿಸಿ ಮಾಲೀಕರಿಗೆ ಮಾಹಿತಿ ನೀಡಿದ್ದಾರೆ.
ಅದರಂತೆ ಪ್ರವೀಣ್ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದು, ವೃತ್ತ ನಿರೀಕ್ಷಕ ಕುಮಾರ್ ಆರಾಧ್ಯ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಲ್ಲದೆ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಪಶು ವೈದ್ಯಾಧಿಕಾರಿಗಳ ಮೂಲಕ ಮರಣೋತ್ತರ ಪರೀಕ್ಷೆ ನಡೆಸಿ ರಾತ್ರಿ ಆನೆಯ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.
ಅರಣ್ಯ ಇಲಾಖೆಯ ಮೂಲಗಳ ಪ್ರಕಾರ ಗಂಡಾನೆ ಗುಂಡೇಟಿನಿಂದ ಸಾವಿಗೀಡಾಗಿರುವುದಾಗಿ ಹೇಳಲಾಗಿದ್ದು, ತನಿಖೆ ಮುಂದುವರಿದಿದೆ.
Next Story





