ಫೋಕ್ಸ್‌ವ್ಯಾಗನ್‌ನ ಈ ಪಾರ್ಕಿಂಗ್ ಲಾಟ್‌ನಲ್ಲಿರುವ ಕಾರುಗಳನ್ನು ಎಣಿಸಲು ನಿಮಗೆ ಸಾಧ್ಯವೇ ಇಲ್ಲ!

ಜರ್ಮನಿಯ ಖ್ಯಾತ ವಾಹನ ತಯಾರಿಕೆ ಸಂಸ್ಥೆ ಫೋಕ್ಸ್‌ವ್ಯಾಗನ್ ಅಮೆರಿಕದಲ್ಲಿ ಪಾರ್ಕಿಂಗ್ ಸ್ಥಳಗಳ ವಿಸ್ತಾರವನ್ನು ಹೊಸ ಎತ್ತರಕ್ಕೊಯ್ದಿದೆ ಮತ್ತು ಅದು ಅಲ್ಲಿ ನಿಲ್ಲಿಸಲಾಗಿರುವ ಕಾರುಗಳನ್ನು ಶೀಘ್ರವೇ ತೆರವುಗೊಳಿಸುವ ಸಾಧ್ಯತೆಗಳಿಲ್ಲ.
ಕಳೆದ ವರ್ಷದ ಫೆಬ್ರವರಿಯಿಂದೀಚಿಗೆ ಸುಮಾರು 3,50,000 ಫೋಕ್ಸ್‌ವ್ಯಾಗನ್ ಮತ್ತು ಆಡಿ ಯುಎಸ್ ಡೀಸಿಲ್ ಕಾರುಗಳ ಮರುಖರೀದಿಗೆ ತಾನು 7.4 ಶತಕೋಟಿ ಡಾಲರ್‌ಗೂ ಅಧಿಕ ಹಣವನ್ನು ವ್ಯಯಿಸಿರುವುದಾಗಿ ಕಂಪನಿಯು ಇತ್ತೀಚಿಗೆ ನ್ಯಾಯಾಲಯಕ್ಕೆ ಸಲ್ಲಿಸಿರುವ ವರದಿಯಲ್ಲಿ ತಿಳಿಸಿದೆ. ಅಮೆರಿಕದ ಕಟ್ಟುನಿಟ್ಟಿನ ಇಂಧನ ನಿಯಮ ಅದನ್ನು ಈ ಸಂಕಷ್ಟಕ್ಕೆ ಸಿಲುಕಿಸಿದೆ. ತಿಂಗಳುಗಳಿಂದಲೂ ಅದು ತಾನು ಮಾರಾಟ ಮಾಡಿದ್ದ ಸಾವಿರಾರು ಕಾರುಗಳನ್ನು ಹಿಂದಕ್ಕೆ ಪಡೆದುಕೊಂಡು ಅಮೆರಿಕದಾದ್ಯಂತ ದಾಸ್ತಾನು ಮಾಡುತ್ತಿದೆ.
![]()
ಅಮೆರಿಕದ ವಿವಿಧೆಡೆಗಳಲ್ಲಿ ಸುರಕ್ಷಿತ ಪಾರ್ಕಿಗ್ ಸ್ಥಳಗಳನ್ನು ಹೊಂದಿರುವ ಫೋಕ್ಸ್‌ವ್ಯಾಗನ್ ಸುಮಾರು ಮೂರು ಲಕ್ಷ ಕಾರುಗಳನ್ನು ಅಲ್ಲಿ ನಿಲ್ಲಿಸಿದೆ. ಡೆಟ್ರಾಯಿಟ್‌ನಲ್ಲಿರುವ ಪಾಳು ಬಿದ್ದಿರುವ ಫುಟ್ಬಾಲ್ ಸ್ಟೇಡಿಯಂ, ಮಿನ್ನಿಸೋಟಾದಲ್ಲಿ ಈಗ ಸ್ಥಗಿತಗೊಂಡಿರುವ ಕಾಗದದ ಕಾರ್ಖಾನೆಯೊಂದರ ಆವರಣ ಮತ್ತು ಕ್ಯಾಲಿಫೋರ್ನಿಯಾದ ವಿಕ್ಟರ್‌ವಿಲ್ಲೆ ಸಮೀಪದ ಪರಿತ್ಯಕ್ತ ಸ್ಮಶಾನ ಇವೆಲ್ಲವೂ ಫೋಕ್ಸ್‌ವ್ಯಾಗನ್‌ನ ಪಾರ್ಕಿಂಗ್ ಲಾಟ್‌ಗಳಲ್ಲಿ ಸೇರಿವೆ.
ಈ ಕಾರುಗಳು ಉಂಟು ಮಾಡುವ ಮಾಲಿನ್ಯದ ಪ್ರಮಾಣವನ್ನು ತಗ್ಗಿಸಲು ಕಂಪನಿಯು ಸೂಕ್ತ ಪರಿಷ್ಕರಣೆಗಳನ್ನು ಕೆಗೊಂಡಿದ್ದು, ಅಮೆರಿಕದ ಅಧಿಕಾರಿಗಳು ಅವುಗಳನ್ನು ಒಪ್ಪಿಕೊಂಡ ಬಳಿಕ ಮಾರುಕಟ್ಟೆಗೆ ಮರು ಬಿಡುಗಡೆ ಅಥವಾ ರಫ್ತು ಮಾಡಲು ಸಾಧ್ಯವಾಗುವಂತೆ ಅವುಗಳ ನಿರ್ವಹಣೆಯನ್ನು ನೋಡಿಕೊಳ್ಳಲಾಗುತ್ತಿದೆ.
![]()
ಪರಿಸರ ಮಾಲಿನ್ಯವನ್ನುಟು ಮಾಡುತ್ತಿರುವ, ಅಮೆರಿಕದಲ್ಲಿ ಮಾರಾಟವಾಗಿರುವ ಸುಮಾರು ಐದು ಲಕ್ಷ ಕಾರುಗಳನ್ನು ಹಿಂದೆಗೆದುಕೊಳ್ಳಲು ಫೋಕ್ಸ್‌ವ್ಯಾಗನ್ ಒಪ್ಪಿಕೊಂಡಿದ್ದು, ಈ ಪ್ರಕ್ರಿಯೆ 2019ರ ಅಂತ್ಯದವರೆಗೂ ಮುಂದುವರಿಯಲಿದೆ.
ಕಳೆದ ಡಿ.31ರವರೆಗೆ ಫೋಕ್ಸ್‌ವ್ಯಾಗನ್ 3,35,00 ಡೀಸಿಲ್ ವಾಹನಗಳನ್ನು ಮರುಖರೀದಿಸಿದ್ದು, ಪರಿಷ್ಕರಣೆಯ ಬಳಿಕ ಅವುಗಳ ಪೈಕಿ 13,000 ಕಾರುಗಳನ್ನು ಮರುಮಾರಾಟ ಮಾಡಿದೆ ಮತ್ತು ಸುಮಾರು 28,000 ಕಾರುಗಳನ್ನು ನಾಶಗೊಳಿಸಿದೆ. ಕಳೆದ ವರ್ಷದ ಅಂಂತ್ಯದಲ್ಲಿ ಅದು ಅಮೆರಿಕದ ವಿವಿಧ ಸ್ಥಳಗಳಲ್ಲಿ ಪಾರ್ಕ್ ಮಾಡಿದ್ದ ಕಾರುಗಳ ಸಂಖ್ಯೆ 294,000 ಆಗಿತ್ತು.
![]()







