ರೈತರಲ್ಲಿ ಧೈರ್ಯ ತುಂಬಲು ಮುಷ್ಟಿ ಧಾನ್ಯ ಅಭಿಯಾನ ಆರಂಭಿಸಿದ್ದೇವೆ: ಶಾಸಕ ಅಪ್ಪಚ್ಚು ರಂಜನ್

ಸೋಮವಾರಪೇಟೆ,ಮಾ,30: ಅನ್ನದಾತರ ಸಂಕಷ್ಟ ಪರಿಹರಿಸಲು ಭಾರತೀಯ ಜನತಾ ಪಾರ್ಟಿ ಮುಂದಾಗಿದ್ದು, ಈ ಕಾರಣಕ್ಕಾಗಿ ರೈತರಲ್ಲಿ ಧೈರ್ಯ ತುಂಬಲು ಮುಷ್ಟಿ ಧಾನ್ಯ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ ಎಂದು ಶಾಸಕ ಅಪ್ಪಚ್ಚು ರಂಜನ್ ತಿಳಿಸಿದರು.
ಬಿಜೆಪಿ ಮುಷ್ಟಿಧಾನ್ಯ ಸಂಗ್ರಹ ಅಭಿಯಾನಕ್ಕೆ ಪಟ್ಟಣದಲ್ಲಿ ಚಾಲನೆ ನೀಡಿದ ನಂತರ ಮಾತನಾಡಿದ ಶಾಸಕರು, ಅನ್ನದಾತರ ಸಮಸ್ಯೆಯನ್ನು ಮುಂದಿನ ದಿನಗಳಲ್ಲಿ ನಮ್ಮ ಸರ್ಕಾರದಿಂದ ಬಗೆಹರಿಸಲಾಗುವದು ಎಂದರು.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 3600ಕ್ಕೂ ಅಧಿಕ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ನಮ್ಮ ಸರ್ಕಾರ ಬಂದ ನಂತರ ಉತ್ಪಾದನಾ ವೆಚ್ಚ ನಿಗದಿಪಡಿಸಿ ರೈತರಿಗೆ ಬಲ ತುಂಬಲಾಗುವದು ಎಂದು ರಂಜನ್ ಹೇಳಿದರು.
ಬಿಜೆಪಿ ಪ್ರಧಾನ ಕಾರ್ಯದರ್ಶಿ ಲೋಕೇಶ್ ವಿ.ಕೆ. ಮಾತನಾಡಿ, ರೈತರ ಹೆಸರಿನಲ್ಲಿಯೇ ಪ್ರಮಾಣ ವಚನ ಸ್ವೀಕರಿಸಿದ ಯಡಿಯೂರಪ್ಪ ಅವರು ಸುಮಾರು 12 ಲಕ್ಷ ಮಂದಿಗೆ ಸುವರ್ಣ ಭೂಮಿ ಯೋಜನೆಯಡಿ ಭೂಮಿ ನೀಡಿದ್ದಾರೆ. ಪ್ರಥಮ ಬಾರಿಗೆ ರಾಜ್ಯದಲ್ಲಿ ರೈತರ ಸಾಲಮನ್ನಾ, ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಿದ್ದಾರೆ. ಇದೀಗ ರೈತರಿಗೆ ಪ್ರೇರಣೆ ನಿಡುವ ನಿಟ್ಟಿನಲ್ಲಿ ಮುಷ್ಟಿ ಅಕ್ಕಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ ಎಂದರು.
ಈ ಸಂದರ್ಭ ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಜಿಲ್ಲಾ ಬಿಜೆಪಿ ಕೃಷಿ ಮೋರ್ಚಾ ಅಧ್ಯಕ್ಷ ತಾಕೇರಿ ಪೊನ್ನಪ್ಪ, ಪಕ್ಷದ ಕ್ಷೇತ್ರ ಸಮಿತಿ ಅಧ್ಯಕ್ಷ ಕೊಮಾರಪ್ಪ, ಪ್ರಧಾನ ಕಾರ್ಯದರ್ಶಿ ಮನು ರೈ, ತಾ.ಪಂ. ಉಪಾಧ್ಯಕ್ಷ ಅಭಿಮನ್ಯುಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.







