ಮೊಬೈಲ್ ಫೋನ್ ಕ್ಲೋನ್ ಮೂಲಕ 1.41 ಲಕ್ಷ ರೂ. ದೋಚಿದ ಖದೀಮ!
ಹೀಗೂ ನಡೆಯುತ್ತೆ ವಂಚನೆ

ಮುಂಬೈ,ಮಾ.30: ಡಿಜಿಟಲ್ ಇಕಾನಮಿಯ ಈ ದಿನಗಳಲ್ಲಿ ಮೊಬೈಲ್ ಪೋನ್ ಮೂಲಕ ಸಣ್ಣದರಿಂದ ಹಿಡಿದು ದೊಡ್ಡಮಟ್ಟದ ಹಣಕಾಸು ವಹಿವಾಟುಗಳು ನಡೆಯುತ್ತಿವೆ. ನಗದುರಹಿತ ವ್ಯವಹಾರಗಳಲ್ಲಿ ರಗಳೆಗಳಿಲ್ಲ,ನಿಜ. ಆದರೆ ಹೆಚ್ಚುತ್ತಿರುವ ದತ್ತಾಂಶ ಉಲ್ಲಂಘನೆ ಪ್ರಕರಣಗಳು ನಮ್ಮ ಹಣ ಅಪಾಯಕ್ಕೆ ಗುರಿಯಾಗುವ ಕಳವಳ ಗಳನ್ನು ಹುಟ್ಟಿಸಿವೆ. ಹೀಗಿರುವಾಗ ನಿಮ್ಮ ಸೆಲ್‌ಫೋನ್‌ನ್ನು ಅತಿಯಾಗಿ ನಂಬಿದ್ದೀರಾ? ಯಾರಾದರೂ ಅದನ್ನು ಹ್ಯಾಕ್ ಮಾಡಿದರೆ ಏನು ಗತಿ? ಇಂತಹ ಅಪರೂಪದ ಸೆಲ್‌ಫೋನ್ ಹ್ಯಾಕಿಂಗ್ ಪ್ರಕರಣವೊಂದರಲ್ಲಿ ಮುಂಬೈ ನಿವಾಸಿಯೋರ್ವರು 1.41 ಲ.ರೂ.ಗಳನ್ನು ಕಳೆದುಕೊಂಡಿದ್ದಾರೆ. ಬ್ಯಾಂಕ್ ಕೈ ಎತ್ತಿರುವುದರಿಂದ ಅವರು ಸಂಪೂರ್ಣವಾಗಿ ಅಸಹಾಯಕರಾಗಿದ್ದಾರೆ. ಯಾರೋ ಖದೀಮ ಅವರ ಫೋನ್‌ನ್ನು ಕ್ಲೋನ್(ತದ್ರೂಪಿ ಸೃಷ್ಟಿ) ಮಾಡಿ, ಅವರ ಬ್ಯಾಂಕ್ ವಿವರಗಳಿಗೆ ಕನ್ನ ಹಾಕಿದ್ದಾನೆ ಎನ್ನಲಾಗಿದೆ.
ಈ ಬಗ್ಗೆ ಮುಂಬೈ ನಿವಾಸಿ ಅಭಿಜಿತ್ ದಾಸ್ ವರ್ಸೋವಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಫೆ.26ರಂದು ಬೆಳಗಿನ ಜಾವ ದಾಸ್ ಎದ್ದಾಗ ಅವರ ಸೆಲ್‌ಫೋನ್‌ನಲ್ಲಿ ಎಸ್‌ಎಂಎಸ್‌ಗಳ ರಾಶಿಯಿತ್ತು. ನಸುಕಿನ 12:45ಕ್ಕೆ ಬಂದಿದ್ದ ಮೊದಲ ಸಂದೇಶವು ನೆಟ್‌ಬ್ಯಾಂಕಿಂಗ್ ಪಾಸ್‌ವರ್ಡ್(ಐಪಿಐಎನ್)ನ ರಿಜನರೇಷನ್‌ಗೆ ಸಂಬಂಧಿಸಿತ್ತು. ಅವರ ಫೋನಿಗೆ ಒಟಿಪಿ ಅಥವಾ ಒಂದು ಬಾರಿಯ ಪಾಸ್‌ವರ್ಡ್‌ನ್ನೂ ಕಳುಹಿಸಲಾಗಿತ್ತು ಮತ್ತು ಐಪಿಐಎನ್‌ನ್ನು ಸೃಷ್ಟಿಸಲಾಗಿತ್ತು. 1:20ರ ಸುಮಾರಿಗೆ ಒಟಿಪಿಯೊಂದಿಗೆ ಹಣ ವರ್ಗಾವಣೆಗೆ ಫಲಾನುಭವಿಯಾಗಿ ಅರವಿಂದ ಕುಮಾರ್ ಎಂಬಾತನ ಹೆಸರನ್ನು ಸೇರಿಸಿ ಇನ್ನೊಂದು ಸಂದೇಶವನ್ನು ಅವರ ಮೊಬೈಲ್‌ಗೆ ಕಳುಹಿಸಲಾಗಿತ್ತು. ಇದರ ನಂತರ ಅರವಿಂದ ಕುಮಾರ ಮತ್ತು ಅರವಿಂದ ಶರ್ಮಾ ಎಂಬ ಎರಡು ಹೆಸರುಗಳನ್ನು ಫಲಾನುಭವಿಗಳಾಗಿ ಸೇರಿಸಿ ಇನ್ನೆರಡು ಸಂದೇಶಗಳು ಬಂದಿದ್ದವು. ಇಷ್ಟಾದ ಬಳಿಕ ಅರವಿಂದ ಕುಮಾರ, ಅರವಿಂದ ಕುಮಾರ ಮತ್ತು ಅರವಿಂದ ಶರ್ಮಾ ಹೆಸರುಗಳಲ್ಲಿ 50,000 ರೂ., 50,000 ರೂ.ಮತ್ತು 41,000 ರೂ.ಗಳು ವರ್ಗಾವಣೆಯಾಗಿರುವ ಬಗ್ಗೆ ಮೂರು ಪ್ರತ್ಯೇಕ ಸಂದೇಶಗಳು ಬಂದಿದ್ದವು. ಈ ಎಲ್ಲ ವರ್ಗಾವಣೆಗಳು ಪುಣೆಯ ಬ್ಯಾಂಕೊಂದರ ಖಾತೆಗಳಿಗೆ ನಡೆದಿದ್ದವು.
ಆದರೆ ತನ್ನಿಂದ ಯಾವುದೇ ತಪ್ಪು ನಡೆದಿಲ್ಲ ಎಂದು ದಾಸ್ ಅವರ ಬ್ಯಾಂಕು ಸ್ಪಷ್ಟಪಡಿಸಿದೆ. ಅವರ ಬ್ಯಾಂಕ್ ವಿವರಗಳನ್ನು ಮತ್ತು ಮೊಬೈಲ್ ಫೋನ್‌ನ್ನು ಹ್ಯಾಕ್ ಮಾಡುವ ಮೂಲಕ ಈ ವಂಚನೆ ನಡೆದಿದೆ ಎಂದು ಅದು ತಿಳಿಸಿದೆ. ಮೊಬೈಲ್ ಫೋನ್‌ನ್ನೇ ಕ್ಲೋನ್ ಮಾಡಿರುವುದರಿಂದ ದಾಸ್‌ಗೆ ಆಗಿರುವ ನಷ್ಟಕ್ಕೆ ತಾನು ಹೊಣೆಗಾರನಲ್ಲ ಎಂದು ಅದು ಕೈ ಎತ್ತಿದೆ.
=====================================================







