ಕಾಂಗ್ರೆಸ್ ಸೋಲಿಸುವ ಗುರಿಯನ್ನಿಟ್ಟು ಯಾರೇ ಬಂದರೂ ಬಿಜೆಪಿಗೆ ಸ್ವಾಗತ: ಕೆ.ಎಸ್.ಈಶ್ವರಪ್ಪ

ಕಲಬುರ್ಗಿ, ಮಾ 30: ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣಕ್ಕಾಗಿ ಆ ಪಕ್ಷವನ್ನು ಸೋಲಿಸುವ ಗುರಿಯನ್ನಿಟ್ಟುಕೊಂಡು ಯಾರೇ ಪಕ್ಷಕ್ಕೆ ಬಂದರೂ ಸ್ವಾಗತಿಸುತ್ತೇವೆ, ಅವರಿಗೆ ಅಗತ್ಯ ಬೆಂಬಲ ನೀಡುತ್ತೇವೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಅವರ ಪುತ್ರ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಸೋಲಿಸುವ ಉದ್ದೇಶದಿಂದ ಅಫ್ಜಲ್‌ಪುರ ಶಾಸಕ ಮಾಲೀಕಯ್ಯ ಗುತ್ತೇದಾರ್ ಬಿಜೆಪಿ ಸೇರ್ಪಡೆಗೆ ತೀರ್ಮಾನಿಸಿದ್ದಾರೆ ಎಂದರು.
ದೇಶದಲ್ಲಿ ನಮ್ಮ ಮೊದಲ ವೈರಿ ಕಾಂಗ್ರೆಸ್. ಹೀಗಾಗಿ ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣ ಮಾಡುವ ಬಿಜೆಪಿ ಗುರಿಯನ್ನು ಒಪ್ಪಿಕೊಳ್ಳುವ ಎಲ್ಲರಿಗೂ ಪಕ್ಷಕ್ಕೆ ಸ್ವಾಗತ ಎಂದ ಅವರು, ಪಕ್ಷಕ್ಕೆ ಬರುವವರಿಗೆ ಟಿಕೆಟ್ ನೀಡುವ ಯಾವುದೇ ಭರವಸೆ ನೀಡಿಲ್ಲ ಎಂದು ಸ್ಪಷ್ಟಣೆ ನೀಡಿದರು.
ಗೆಲ್ಲುವ ಅಭ್ಯರ್ಥಿಗಳ ಪಟ್ಟಿ ತಯಾರಿಸಲಾಗುತ್ತಿದ್ದು, ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಇನ್ನೂ ಅಂತಿಮವಾಗಿಲ್ಲ. ಪಕ್ಷದ ವರಿಷ್ಠರು ಸಮೀಕ್ಷೆ ನಡೆಸುತ್ತಿದ್ದು, ಅವರೇ ಪಟ್ಟಿಯನ್ನು ಅಂತಿಮಗೊಳಿಸಲಿದ್ದಾರೆಂದ ಅವರು, ಟಿಕೆಟ್ ಈಗಲೇ ಘೋಷಿಸಿದರೆ ಬರುವವರು ಬರಲ್ಲ, ಹೀಗಾಗಿ ಕಾದು ನೋಡುತ್ತಿದ್ದು, ನಾವೂ ಚಾಣಕ್ಯ ನೀತಿ ಅನುಸರಿಸುತ್ತೇವೆ ಎಂದರು.
ಸಮಾಧಾನ ಮೋರ್ಚಾ: ಯುವ ಮೋರ್ಚಾ, ಮಹಿಳಾ ಮೋರ್ಚಾ, ರೈತ ಮೋರ್ಚಾ ಮಾದರಿಯಲ್ಲೆ ಪಕ್ಷದಲ್ಲಿ ಸಮಾಧಾನ ಮೋರ್ಚಾವೂ ಇದೆ. ಯಾರಿಗೆ ಟಿಕೆಟ್ ಸಿಗುವುದಿಲ್ಲವೋ ಅಥವಾ ಅಸಮಾಧಾನ ಹೊಂದಿರುತ್ತಾರೆಯೋ ಅಂತವರ ಸಮಾಧಾನಕ್ಕೆ ಮೋರ್ಚಾ ಕೆಲಸ ಮಾಡಲಿದೆ ಎಂದು ಈಶ್ವರಪ್ಪ, ನಿಷ್ಠಾವಂತರ ಕಡೆಗಣನೆ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು.
ಎ.3ಕ್ಕೆ ಸಮಾವೇಶ: ಕಾಗಿನೆಲೆಯಲ್ಲಿ ಎಪ್ರಿಲ್ 3ರಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದಿಂದ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಹೀಗಾಗಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪೂರ್ವಭಾವಿ ಸಭೆಗಳನ್ನು ನಡೆಸಲಾಗುತ್ತಿದೆ ಎಂದು ಈಶ್ವರಪ್ಪ ನುಡಿದರು.
ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮತ್ತು ನನ್ನ ಮಧ್ಯೆ ಯಾವತ್ತೂ ಸಂಘರ್ಷ ನಡೆದಿಲ್ಲ. ಗಂಡ-ಹೆಂಡತಿ ಜಗಳದಂತೆ ಆಗಾಗ ಮುನಿಸಿಕೊಂಡಿದ್ದೇವೆ. ಸೈದ್ಧಾಂತಿಕ ಮತ್ತು ವೈಚಾರಿಕ ಕಾರಣಕ್ಕಾಗಿ ಸಣ್ಣಪುಟ್ಟ ಭಿನ್ನಾಭಿಪ್ರಾಯ ನಡೆದಿದ್ದು, ಇದೀಗ ಎಲ್ಲವೂ ಸರಿಯಾಗಿವೆ ಎಂದು ಈಶ್ವರಪ್ಪ ಹೇಳಿದರು.
ಶಾಸಕ ಮಾಲೀಕಯ್ಯ ಗುತ್ತೇದಾರ್ ಗೆ ಮತ್ತೆ ಬಿಜೆಪಿ ಮಧ್ಯೆ ಪ್ರೀತಿ ಹುಟ್ಟಿದ್ದು ಹೇಗೆ ಎಂಬುದು ಮುಖ್ಯವಲ್ಲ. ಪ್ರೀತಿ ಯಾರು ಮಾಡಿದರೇನು, ಹುಡುಗ-ಹುಡುಗಿಯ ಹಿಂದೆ ಹೋಗಲಿ, ಹುಡುಗಿ-ಹುಡುಗನ ಹಿಂದೆಯೇ ಹೋಗಲಿ, ಮದುವೆ ಆಗುವುದು ಬಹಳ ಮುಖ್ಯ’
-ಕೆ.ಎಸ್.ಈಶ್ವರಪ್ಪ ಮೇಲ್ಮನೆ ವಿಪಕ್ಷ ನಾಯಕ







