ಚುನಾವಣಾ ಗೀತೆ ಮತದಾರರಲ್ಲಿ ಪ್ರಭಾವ ಬೀರಲಿದೆ: ರಾಜ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್
ವಿಧಾನಸೌಧದಲ್ಲಿ ಚುನಾವಣಾ ಗೀತೆಯ ಚಿತ್ರೀಕರಣ
ಬೆಂಗಳೂರು, ಮಾ.30: ಕಳೆದ ಐದು ದಿನಗಳಿಂದ ರಾಜ್ಯಾದ್ಯಂತ ಚುನಾವಣಾ ಗೀತೆಯ ಚಿತ್ರೀಕರಣ ನಡೆಯುತ್ತಿದ್ದು, ಶುಕ್ರವಾರ ಕಂಠೀರವ ಸ್ಟೇಡಿಯಂ ಮತ್ತು ವಿಧಾನಸೌಧದಲ್ಲಿ ಚಿತ್ರೀಕರಿಸಲಾಯಿತು ಎಂದು ರಾಜ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ತಿಳಿಸಿದರು.
ಶುಕ್ರವಾರ ವಿಧಾನಸೌಧದ ವಿವಿಧೆಡೆ ಚುನಾವಣಾ ಗೀತೆಯ ಚಿತ್ರೀಕರಣ ನಡೆಯಿತು. ಈ ವೇಳೆ ಮಾತನಾಡಿದ ಅವರು, ಚುನಾವಣಾ ಆಯೋಗವು ಚುನಾವಣಾ ಗೀತೆ ರಚನೆಯ ಕುರಿತು ಹಲವು ದಿನಗಳಿಂದ ಸಂಶೋಧನೆ ನಡೆಸಲಾಗಿದ್ದು, ಈ ಗೀತೆ ಚುನಾವಣಾ ಆಯೋಗದ ಧ್ಯೇಯವನ್ನು ಮತದಾರರಲ್ಲಿ ಮೂಡಿಸಲು ಯಶಸ್ವಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಚುನಾವಣಾ ಗೀತೆ ಜಾಗೃತಿ ಮತ್ತು ನೈತಿಕ ಮತದಾನವನ್ನು ಉತ್ತೇಜಿಸಲಿದೆ. ಹಾಗೂ ದೊಡ್ಡ ಸಂಖ್ಯೆಯಲ್ಲಿ ಮತದಾರರು ಆಗಮಿಸಿ ಮತದಾನ ಮಾಡಲು ಪ್ರೇರೇಪಿಸುತ್ತದೆ. ಈ ನಿಟ್ಟಿನಲ್ಲಿ ಚುನಾವಣಾ ಗೀತೆಯನ್ನು ರೇಡಿಯೊ, ಟಿ.ವಿ, ಚಲನಚಿತ್ರಗಳು ಮತ್ತಿತರೆ ಮಾಧ್ಯಮಗಳಲ್ಲಿ ಪ್ರಸಾರ ಮಾಡಲಿದ್ದೇವೆ ಎಂದು ಅವರು ತಿಳಿಸಿದರು.
ನಿರ್ದೇಶಕ ಯೋಗರಾಜ್ ಭಟ್ ಮಾತನಾಡಿ, ಚುನಾವಣಾ ಗೀತೆಯ ಯೋಜನೆ ನನ್ನ ಹೃದಯಕ್ಕೆ ಹತ್ತಿರವಾಗಿದೆ. ಹಲವು ವರ್ಷಗಳಿಂದ ನಾನು ಸಮಾಜಕ್ಕೆ ಮತ್ತು ಪ್ರಜಾಪ್ರಭುತ್ವಕ್ಕೆ ಏನಾದರೂ ಮಾಡಬೇಕೆಂಬ ಬಯಕೆ ಹೊಂದಿದ್ದೆ. ಈ ಚುನಾವಣಾ ಗೀತೆ ಅದನ್ನು ಈಡೇರಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಚುನಾವಣಾ ಗೀತೆ ವಿಶಿಷ್ಟ ಪರಿಕಲ್ಪನೆಯಾಗಿದ್ದು, ಜನರಿಗೆ ನೇರ ಭಾಷಣದ ಮೂಲಕ ನೀಡಲಾಗದ ಉತ್ತೇಜನವನ್ನು ಈ ಗೀತೆ ನೀಡುತ್ತದೆ. ಗೀತೆಗಳು ಸದಾ ಗುನುಗುವಂತೆ ಮತ್ತು ಮನಸ್ಸಿನಲ್ಲಿ ದೀರ್ಘ ಕಾಲ ಉಳಿಯುವಂತೆ ನಿರ್ಮಿಸಲಾಗಿದೆ. ಹೀಗಾಗಿ ಈ ಚುನಾವಣಾ ಗೀತೆ ಪ್ರತಿಯೊಬ್ಬರ ಮನದಲ್ಲೂ ಉಳಿದು ಅವರಿಗೆ ಪಾರದರ್ಶಕ ಚುನಾವಣೆಗಳ ಕುರಿತು ಅರಿವು ಮೂಡಿಸುತ್ತದೆ ಎಂದು ಅವರು ಆಶಯ ವ್ಯಕ್ತಪಡಿಸಿದರು.
ಕರ್ನಾಟಕದ ನೂರಾರು ಸಾಂಸ್ಕೃತಿಕ ಕಲಾವಿದರು ಚುನಾವಣಾ ಗೀತೆಯ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ. ವಿಕಲಚೇತನರು, ಆದಿವಾಸಿಗಳು, ತೃತೀಯ ಲಿಂಗಿಗಳು ಮತ್ತು ಯುವ ಮತದಾರರನ್ನು ಈ ಚುನಾವಣಾ ಗೀತೆಯ ಚಿತ್ರೀಕರಣಕ್ಕೆ ತೊಡಗಿಸಿಕೊಂಡಿದ್ದಾರೆ. ಚುನಾವಣಾ ಗೀತೆಗೆ ಸಂಗೀತ ಸಂಯೋಜನೆಯನ್ನು ಸಂಗೀತ ನಿರ್ದೇಶಕ ಹರಿಕೃಷ್ಣ ಮಾಡಲಿದ್ದಾರೆ. ಗಾಯಕ ವಿಜಯ್ ಪ್ರಕಾಶ್ ಮತ್ತು ಅವರ ತಂಡದ ಗಾಯಕರು ಹಾಡಲಿದ್ದಾರೆ. ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ ನೃತ್ಯ ಸಂಯೋಜನೆ ಮಾಡಿದ್ದಾರೆ ಎಂದು ಅವರು ಹೇಳಿದರು.