ತನ್ನ ಬಾಗಿಲಿಗೆ ಪೊಲೀಸರು ಬಂದು ನಿಲ್ಲುವಾಗಲೇ ಆತನಿಗೆ ಗೊತ್ತಾಗಿದ್ದು ತಾನು 'ಭಯೋತ್ಪಾದಕ' ಎಂದು !
ಹೀಗೊಂದು ಹೊಸ ಟೆರರಿಸ್ಟ್ ಕತೆ

ಶ್ರೀನಗರ, ಮಾ. 30 : ಆತನ ಅಂಗಡಿ ಬಾಗಿಲಿಗೆ ಪೊಲೀಸರು ಬಂದು ನಿಲ್ಲುವವರೆಗೆ ಆಖಿಬ್ ಫಾರೂಕ್ ಮೀರ್ ಗೆ ತಾನು 'ಹೊಸತಾಗಿ ಸೇರ್ಪಡೆಗೊಂಡ ಭಯೋತ್ಪಾದಕ' ಎಂಬುದೇ ಗೊತ್ತಿರಲಿಲ್ಲ !
ಪೊಲೀಸರು ಬಂದು ಆಖಿಬ್ ನನ್ನು ಮತ್ತು ಅವರ ಮನೆಯವರನ್ನು ವಿವರವಾಗಿ ವಿಚಾರಣೆ ನಡೆಸಿದ ಬಳಿಕವೇ ಆತನಿಗೆ ಗೊತ್ತಾಗಿದ್ದು ಅಂಗಡಿ ಮಾಲಕನಾದ ತಾನು ಇದ್ದಕ್ಕಿದ್ದಂತೆ ಭಯೋತ್ಪಾದಕನಾಗಿಬಿಟ್ಟಿದ್ದೆ ಎಂದು !
ಆಗಿದ್ದಿಷ್ಟು. ಇಲ್ಲಿನ ಗಂದೇರ್ಬಲ್ ನ ಬೀಹಾಮ ಪ್ರದೇಶದಲ್ಲಿ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿರುವ ಆಖಿಬ್ ಬಗ್ಗೆ ಸ್ಥಳೀಯರಲ್ಲಿ ಉತ್ತಮ ಅಭಿಪ್ರಾಯವಿದೆ. ಈವರೆಗೆ ಆತ ಯಾವುದೇ ಅಪರಾಧ ಚಟುವಟಿಕೆಗಳಲ್ಲಿ ಭಾಗವಹಿಸಿದ ದಾಖಲೆಗಳೂ ಇಲ್ಲ. ಆದರೆ ಇದ್ದಕ್ಕಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಆಖಿಬ್ ನ ಚಿತ್ರ ಹರಡುತ್ತದೆ. ಅದರ ಜೊತೆ ಒಂದು ಸಂದೇಶ. ಆಖಿಬ್ ಉಗ್ರಗಾಮಿ ಸಂಘಟನೆಯೊಂದಕ್ಕೆ ಇತ್ತೀಚಿಗೆ ಸೇರ್ಪಡೆಯಾಗಿದ್ದಾರೆ ಎಂಬುದು ಆ ಸಂದೇಶದ ಸಾರಾಂಶ. ಹಾಗಾಗಿ ಆಖಿಬ್ ಫೋಟೋ ವೈರಲ್ ಆಗಲು ಹೆಚ್ಚು ಸಮಯ ಬೇಕಾಗಿರಲಿಲ್ಲ. ಆದರೆ ಆಖಿಬ್ ಮತ್ತು ಅವರ ಮನೆಯವರಿಗೆ ಮಾತ್ರ ಈ ವಿಷಯ ಗೊತ್ತೇ ಆಗಿಲ್ಲ.
ಸಾಮಾಜಿಕ ಜಾಲತಾಣಗಳಲ್ಲಿ ಆಖಿಬ್ ಕುರಿತ ಸಂದೇಶ ನೋಡಿದ ಪೊಲೀಸರು ಅವರನ್ನು ಹುಡುಕಿಕೊಂಡು ಅಂಗಡಿಗೆ ಬಂದಿದ್ದಾರೆ. ಬಳಿಕ ವದಂತಿ ಕುರಿತು ಸಮಗ್ರ ವಿಚಾರಣೆ ನಡೆಸಿದ್ದಾರೆ. ವದಂತಿ ಸುಳ್ಳು ಎಂದು ಖಚಿತವಾದ ಮೇಲೆ ಆಖಿಬ್ ರನ್ನು ಅವರ ಪಾಡಿಗೆ ಬಿಟ್ಟು ಹೋಗಿದ್ದಾರೆ. ಆದರೆ ಈ ಪ್ರಕ್ರಿಯೆ ಮುಗಿಯುವಾಗ ಆಖಿಬ್ ಹಾಗು ಅವರ ಮನೆಯವರು ಕಂಗಾಲಾಗಿದ್ದಾರೆ. ಎಲ್ಲೆಡೆಯಿಂದ ಸಂಬಂಧಿಕರ, ಮಿತ್ರರ ಕರೆಗಳು ಬಂದಿವೆ.
ಬಳಿಕ ತನಿಖೆ ನಡೆಸಿದ ಪೊಲೀಸರಿಗೆ ದುರುದ್ದೇಶದಿಂದಲೇ ಆಖಿಬ್ ಫೋಟೊವನ್ನು ಸುಳ್ಳು ಸುದ್ದಿ ಜೊತೆ ವಾಟ್ಸ್ಆ್ಯಪ್ ಹಾಗು ಫೇಸ್ ಬುಕ್ ಗಳಲ್ಲಿ ಹರಡಲಾಗಿತ್ತು ಎಂದು ತಿಳಿದು ಬಂದಿದೆ. ಪ್ರಕರಣದಲ್ಲಿ ಓರ್ವ ಆರೋಪಿ ಮಂಝುರ್ ಅಹ್ಮದ್ ಘನಿ ಎಂಬಾತನನ್ನು ಬಂಧಿಸಲಾಗಿದೆ. ಇಂತಹ ವದಂತಿಕೋರರ ವಿರುದ್ಧ ಅತ್ಯಂತ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.







