ಪಡುಬಿದ್ರೆಯಲ್ಲಿ ಕ್ರಿಕೆಟ್ ಪಂದ್ಯಾಟ: ನೀತಿ ಸಂಹಿತೆ, ರಾಜಕೀಯ ಮುಖಂಡರ ಕಟೌಟ್ ತೆರವು

ಪಡುಬಿದ್ರೆ, ಮಾ. 30: ಚುನಾವಣೆ ಘೋಷಣೆಯಾದ ಬಳಿಕ ನೀತಿ ಸಂಹಿತೆಯು ಜಾರಿಯಾಗಿದ್ದು, ಪಡುಬಿದ್ರೆಯ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಕ್ರಿಕೆಟ್ ಪಂದ್ಯಾಟದಲ್ಲಿ ಅಳವಡಿಸಿದ ಬ್ಯಾನರ್‌ಗೂ ನೀತಿ ಸಂಹಿತೆಯ ಕಾವು ತಟ್ಟಿದೆ.
ನಾಲ್ಕು ದಿನಗಳ ಕಾಲ ನಡೆಯಲಿರುವ ಕ್ರಿಕೆಟ್ ಪಂದ್ಯಾಟದ ಮೈದಾನದ ಸುತ್ತಲೂ ರಾಜಕೀಯ ಪಕ್ಷಗಳ ಮುಖಂಡರ ಶುಭಕೋರುವ ಕಟೌಟ್‌ಗಳನ್ನು ಅಳವಡಿಸಲಾಗಿತ್ತು. ಪಡುಬಿದ್ರೆಯ ಗ್ರಾ.ಪಂ. ಪಿಡಿಒ ಪಂಚಾಕ್ಷರಿ ಕೇರಿಮಠ್, ಸಂಘಟಕರಿಗೆ ರಾಜಕೀಯ ಪಕ್ಷಗಳ ಮುಖಂಡರ ಬ್ಯಾನರ್‌ಗಳನ್ನು ತೆರವುಗೊಳಿಸಲು ಗಡುವು ನೀಡಿ ಎಚ್ಚರಿಸಿದರು. ಅವರ ಸೂಚನೆಯ ಬಳಿಕ ಸಂಘಟಕರು ಬ್ಯಾನರ್‌ಗಳನ್ನು ತೆರವುಗೊಳಿಸಿದರು.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತೇನೆ ಎಂದು ಹೇಳಿದ ಶೀರೂರು ಸ್ವಾಮೀಜಿಯವರ ಕಟೌಟ್‌ನ್ನು ಮಾತ್ರ ಸಂಘಟಕರು ತೆರವುಗೊಳಿಸದೆ ಇರುವುದು ಸಾರ್ವಜನಿಕರಲ್ಲಿ ಅಸಮಾಧಾನ ಮೂಡಿಸಿದೆ.
ಉದ್ಘಾಟನೆ: ಪಡುಬಿದ್ರೆ ನವಚೇತನ ಕ್ರಿಕೆಟರ್ಸ್ ಆಶ್ರಯದಲ್ಲಿ ಐಪಿಎಲ್ ಮಾದರಿಯಲ್ಲಿ ಪಡುಬಿದ್ರೆ ಪ್ರೀಮಿಯರ್ ಲೀಗ್ (ಪಿಪಿಎಲ್) ಪಂದ್ಯಾಕೂಟ ನಾಲ್ಕು ದಿನಗಳ ಕಾಲ ನಡೆಯಲಿದ್ದು, ಪಿಪಿಎಲ್ ಪಂದ್ಯದಲ್ಲಿ 14 ತಂಡಗಳ ಮೂಲಕ 200ಕ್ಕೂ ಹೆಚ್ಚು ಕ್ರೀಡಾ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಲಾಗಿದೆ.
ಪಂದ್ಯಾಕೂಟಕ್ಕೆ ಅದಾನಿ-ಯುಪಿಸಿಎಲ್ ಜಂಟಿ ಅಧ್ಯಕ್ಷ ಕಿಶೋರ್ ಆಳ್ವ ಉದ್ಘಾಟಿಸಿದರು. ಉಡುಪಿ ಜಿಲ್ಲಾ ಟೆನ್ನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಶನ್ ಅಧ್ಯಕ್ಷ ಶರತ್ ಶೆಟ್ಟಿ, ಬಿಜೆಪಿ ಕಾಪು ಕ್ಷೇತ್ರ ಸಮಿತಿ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಜಿಪಂ ಸದಸ್ಯ ಶಶಿಕಾಂತ್ ಪಡುಬಿದ್ರೆ, ತಾಪಂ ಸದಸ್ಯೆ ನೀತಾ ಗುರುರಾಜ್, ಪಾಲ್ಗೊಂಡಿರುವ 14 ತಂಡಗಳ ಮಾಲಕರು ಉಪಸ್ಥಿತರಿದ್ದರು.







