ಬೆಂಗಳೂರು: ಅಂಬೇಡ್ಕರ್ ಸಮಾಜ ಪಾರ್ಟಿ ಪ್ರಣಾಳಿಕೆ ಬಿಡುಗಡೆ
ಬೆಂಗಳೂರು, ಮಾ.30: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿ ಅಂಬೇಡ್ಕರ್ ಸಮಾಜ ಪಾರ್ಟಿ ಸ್ಪರ್ಧೆ ಮಾಡಲಿದ್ದು, ಪಕ್ಷದ ಪ್ರಣಾಳಿಕೆಯನ್ನು ಇಂದಿಲ್ಲಿ ಬಿಡುಗಡೆ ಮಾಡಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ರಾಜ್ಯ ಉಸ್ತುವಾರಿ ಭಾಯ್ ನರೇಶ್ ಸಿಂಧು, ದೇಶದಲ್ಲಿ ದಲಿತ, ಹಿಂದುಳಿದ, ಅಲ್ಪಸಂಖ್ಯಾತರ ಪರವಾಗಿ, ಅವರ ಧ್ವನಿಯಾಗಿ ಕೆಲಸ ಮಾಡುವ ಸರಕಾರವನ್ನು ಸ್ಥಾಪನೆ ಮಾಡುವ ಉದ್ದೇಶದಿಂದ ಪಕ್ಷ ಸ್ಥಾಪನೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಎಲ್ಲ 224 ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳು ಸ್ಪರ್ಧಿಸಲಿದ್ದು, ಮೊದಲ ಹಂತವಾಗಿ 25 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ. ಮಾ.18 ರೊಳಗೆ ಅಂತಿಮ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಹಿರಿಯರಿಗೆ, ಅಂಗವಿಕಲರಿಗೆ ಎರಡು ಸಾವಿರ ಹಾಗೂ ವಿಧವೆಯರಿಗೆ ಐದು ಸಾವಿರ ರೂ.ಗಳು ಮಾಶಾಸನ ನೀಡಲಾಗುತ್ತದೆ. ಎಸ್ಸಿ, ಎಸ್ಟಿ, ಒಬಿಸಿ ಹಾಗೂ ಅಲ್ಪಸಂಖ್ಯಾತ ವಸತಿ ನಿಲಯಗಳಿಗೆ ರಕ್ಷಕರ ನೇಮಕ. ಮಸೀದಿ, ದರ್ಗಾಗಳಲ್ಲಿ ಮುಜಾವರ್, ಇಮಾಮ್ ಗಳಿಗೆ ಮಾಸಿಕ 10 ಸಾವಿರ ಸಂಭಾವನೆ ನೀಡಲಾಗುತ್ತದೆ. ದೇವನಹಳ್ಳಿಯಲ್ಲಿರುವ ಟಿಪ್ಪು ಸುಲ್ತಾನ್ ಜನ್ಮಸ್ಥಳವನ್ನು ರಾಷ್ಟ್ರೀಯ ಉದ್ಯಾನವನವನ್ನಾಗಿ ಘೋಷಣೆ ಮಾಡಲಾಗುವುದು. ಪ್ರೌಢ ಶಿಕ್ಷಣದ ನಂತರ ಎಲ್ಲ ವಿದ್ಯಾರ್ಥಿಗಳಿಗೆ ಸಮಾನ ವಿದ್ಯಾರ್ಥಿ ವೇತನ, ಬೀದಿ ಬದಿ ವ್ಯಾಪಾರಿಗಳಿಗೆ ಮಳಿಗೆ ನಿರ್ಮಾಣ ಹಾಗೂ 5 ಲಕ್ಷ ಸಾಲ ಸೌಲಭ್ಯ, ಮಹಿಳೆಯರ ಮೇಲಿನ ದೌರ್ಜನ್ಯ, ದಬ್ಬಾಳಿಕೆ ನಿಯಂತ್ರಣಕ್ಕೆ ಕಠಿಣ ಕಾನೂನು ಜಾರಿ ಸೇರಿದಂತೆ ಹಲವು ಅಂಶಗಳನ್ನು ಒಳಗೊಳ್ಳಲಾಗಿದೆ ಎಂದು ಅವರು ವಿವರಿಸಿದರು.







