ಬೆಂಗಳೂರು: ಧಾರಾಕಾರ ಮಳೆಗೆ ಧರೆಗುರುಳಿದ ಮರಗಳು
ಕೆಲವೆಡೆ ವಿದ್ಯುತ್ ಸ್ಥಗಿತ, ಮರಬಿದ್ದು ಬೈಕ್, ಆಟೊ ಜಖಂ

ಬೆಂಗಳೂರು, ಮಾ.30: ನಗರದಲ್ಲಿ ಸುರಿದ ಬಿರುಗಾಳಿ ಸಹಿತ ಧಾರಾಕಾರ ಮಳೆಗೆ ನಗರದ ವಿವಿಧೆಡೆ ಮರಗಳು ಧರೆಗುರುಳಿದ ಪರಿಣಾಮ ವಾಹನ ದಟ್ಟಣೆ ಹೆಚ್ಚಾಗಿ ವಾಹನ ಸವಾರರು ಮತ್ತು ಪ್ರಯಾಣಿಕರು ಪರದಾಡುವಂತಾಯಿತು.
ಶುಕ್ರವಾರ ಬೆಳಗ್ಗೆಯೆ ಸುಡು ಬಿಸಿಲಿನಿಂದ ಕಿರಿಕಿರಿ ಅನುಭವಿಸಿದ ಬೆಂಗಳೂರು ಜನತೆ, ಸಂಜೆಯ ಹೊತ್ತಿಗೆ ಸುರಿದ ಬಿರುಗಾಳಿ ಸಹಿತ ಮಳೆಗೆ ಟ್ರಾಫಿಕ್ ಸಮಸ್ಯೆಯನ್ನು ಎದುರಿಸಿದರು. ಇದರ ಜೊತೆಗೆ ಹನುಮಂತನಗರ, ಬಿಟಿಎಂ ಲೇಔಟ್, ಬನಶಂಕರಿ ಸೇರಿದಂತೆ ಹಲವೆಡೆ ಮರಗಳು ಧರೆಗುರುಳಿದ್ದು, ಪ್ರಯಾಣಿಕರಲ್ಲಿ ಆತಂಕವನ್ನುಂಟು ಮಾಡಿತು.
ವಿದ್ಯುತ್ ಸ್ಥಗಿತ: ನಗರದ ಮಲ್ಲೇಶ್ವರಂ ಬಿಜೆಪಿ ಕಚೇರಿ ಬಳಿ ತೆಂಗಿನ ಮರವೊಂದು ವಿದ್ಯುತ್ ಕಂಬದ ಮೇಲೆ ಬಿದ್ದು, ಬೈಕ್ ಹಾಗೂ ಆಟೋದ ಮೇಲೆ ಉರುಳಿದ ಪರಿಣಾಮ ವಾಹನಗಳು ಜಖಂಗೊಂಡಿವೆ. ತಕ್ಷಣವೇ ವಿದ್ಯುತ್ ಕಂಬವನ್ನು ತೆರವುಗೊಳಿಸಿದ್ದು, ಮುನ್ನೆಚ್ಚರಿಕೆಯಾಗಿ ಸುತ್ತಮುತ್ತಲ ಪ್ರದೇಶದಲ್ಲಿ ವಿದ್ಯುತ್ತನ್ನು ಸ್ಥಗಿತಗೊಳಿಸಲಾಯಿತು.
ರಜೆಯಿಂದ ನಿರಾಳ: ಶುಕ್ರವಾರ ಸರಕಾರಿ ರಜೆ ಇದ್ದ ಕಾರಣ ಮಳೆಯ ದುಷ್ಪರಿಣಾಮಗಳು ಹೆಚ್ಚಾಗಿ ಸಂಭವಿಸಿಲ್ಲ. ಮಳೆಯ ಕುರಿತು ಹವಾಮಾನ ಇಲಾಖೆ ನಿನ್ನೆಯೆ ಮುನ್ಸೂಚನೆ ನೀಡಿದ ಪರಿಣಾಮ ನಗರದ ಜನತೆ ಮನೆಯಲ್ಲಿಯೆ ಉಳಿದು ಮಳೆಯ ಕಿರಿಕಿರಿಯಿಂದ ತಪ್ಪಿಸಿಕೊಂಡಿದ್ದಾರೆ.







