ಪರಿಸರ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿ: ಐ.ಎಸ್.ಶಿವಕುಮಾರ್

ಬೆಂಗಳೂರು, ಮಾ.30: ಸ್ವಚ್ಛ ಪರಿಸರ ಕಾಪಾಡುವುದು ಎಲ್ಲರ ಜವಾಬ್ದಾರಿಯಾಗಿದ್ದು, ಸಾಧ್ಯವಾದಷ್ಟು ಮಟ್ಟಿಗೆ ಯುವಜನರ ಮಧ್ಯೆ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಪ್ರಭಾರಿ ಉಪ ಕುಲಪತಿ ಪ್ರೊ.ಐ.ಎಸ್.ಶಿವಕುಮಾರ್ ಹೇಳಿದ್ದಾರೆ.
ಕೋಲಾರ ಸ್ನಾತಕೋತ್ತರ ಕೇಂದ್ರದ ಸಮಾಜಕಾರ್ಯ ವಿಭಾಗ ಹಾಗೂ ಬೆಂಗಳೂರು ವಿವಿ ಸಮಾಜ ಕಾರ್ಯ ವಿಭಾಗದ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಸಮಾಜ ಕಾರ್ಯ ದಿನಾಚರಣೆಯ ಅಂಗವಾಗಿ ನಮ್ಮ ಕಸ ನಮ್ಮ ಜವಾಬ್ದಾರಿ ಜಾಥಾಗೆ ಚಾಲನೆ ನೀಡಿ ಮಾತನಾಡಿದ ಅವರು, ಯುವಜನರು ಕೇವಲ ಜಾಗೃತ ಕಾರ್ಯಕ್ರಮಗಳಿಗೆ ಸೀಮಿತಗೊಳ್ಳದೇ ತಮ್ಮ ಜೀವನದಲ್ಲಿ ಅಳವಡಿಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಅನಂತರ ನಡೆದ ಸಮುದಾಯ ಮತ್ತು ಪರಿಸರಾತ್ಮಕ ಸುಸ್ಥಿರತೆಯಲ್ಲಿ ಯುವಜನರು ಕುರಿತ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಮಾತನಾಡಿದ ಬೆಂಗಳೂರು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಬಿ.ಕೆ.ರವಿ, ಸಮಾಜದ ಶ್ರೇಣಿಕತ ವ್ಯವಸ್ಥೆಯಲ್ಲಿ, ಸಾಮಾಜಿಕ ಅವ್ಯವಸ್ಥೆ ಹೊಂದಿರುವ ಭಾರತ ದೇಶಕ್ಕೆ ಸಮಾಜ ಕಾರ್ಯದ ಕೊಡುಗೆ ಅಪಾರವಾಗಿದೆ ಎಂದು ಶ್ಲಾಘಿಸಿದರು.
ಸಮಾಜ ಕಾರ್ಯಕರ್ತರು ಸಮಾಜದ ಕಣ್ಣನ್ನು ತೆರೆಸುವ ಕೆಲಸ ಮಾಡಬೇಕು. ಶೋಷಿತ ವರ್ಗದವರು, ಅವಕಾಶ ವಂಚಿತರು, ಹಿಂದುಳಿದವರನ್ನು ಒಗ್ಗೂಡಿಸಿ ನವ ಸಮಾಜನ್ನು ನಿರ್ಮಾಣ ಮಾಡಬೇಕಾಗುತ್ತದೆ. ಸಾಮಾಜಿಕ ಹೊಣೆಗಾರಿಕೆಯನ್ನು ಮೂಡಿಸುವ ರಾಯಭಾರಿಗಳಾಗಿ ಸಮಾಜ ಕಾರ್ಯಕರ್ತರು ಕಾರ್ಯ ನಿರ್ವಹಿಸಬೇಕಿದೆ. ಹಾಗೂ ಹಾದಿ ತಪ್ಪುತ್ತಿರುವ ಸಮಾಜವನ್ನು ಸರಿದಾರಿಗೆ ತರಬೇಕಿದೆ. ಸಾಮಾಜಿಕ ಸ್ವಾಸ್ಥವನ್ನು ಕಾಪಾಡುವ ಪ್ರತಿನಿಧಿಗಳು ಸಮಾಜ ಕಾರ್ಯಕರ್ತರಾಗುತ್ತಾರೆ ಎಂದು ಅವರು ಹೇಳಿದರು.
ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥ ಪ್ರೊ.ಕೋದಂಡರಾಮ ಮಾತನಾಡಿ, ವ್ಯಕ್ತಿ, ವೃಂದ ಹಾಗೂ ಸಮುದಾಯಗಳಲ್ಲಿ ಬದಲಾವಣೆ ತರಲು ಲಭ್ಯವಿರುವ ಸಂಪನ್ಮೂಲಗಳನ್ನು ಹಿತವಾಗಿ ಬಳಸಿಕೊಳ್ಳಬೇಕು ಎಂದ ಅವರು, ಮಾನವನ ಬಹುಪಾಲು ಸಮಸ್ಯೆಗಳು ಆಂತರಿಕ ಹಾಗೂ ಬಾಹ್ಯ ಪರಿಸರದೊಂದಿಗೆ ತಳಕು ಹಾಕಿಕೊಂಡಿದ್ದು, ಪರಿಸರವನ್ನು ಶುದ್ಧೀಕರಿಸದ ಹೊರತು ವ್ಯಕ್ತಿಗಳ ಅಭಿವೃದ್ಧಿ ಅಸಾಧ್ಯ. ಹೀಗಾಗಿ, ಪರಿಸರವನ್ನು ಶುದ್ಧೀಕರಿಸುವ ಕಾರ್ಯವನ್ನು ಸಮಾಜಕಾರ್ಯಕರ್ತರು ಕೈಗೊಳ್ಳಬೇಕಿದೆ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕ ಎನ್.ಗಂಗಾಧರ ರೆಡ್ಡಿ, ಪ್ರೊ.ರೇಣುಕಾ ಪ್ರಶಾದ್, ಸಹಕಾರ ಸಂಘಗಳ ನಿರ್ದೇಶಕಿ ಪ್ರೇಮಕುಮಾರಿ, ಸಿಂಡಿಕೇಟ್ ಸದಸ್ಯರಾದ ವಸಂತ್ ಕುಮಾರ್ ಹಾಗೂ ಶಿವಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಅಂತರ ಕಾಲೇಜು ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರಿಗೆ ಬಹುಮಾನ ವಿತರಣೆ ಮಾಡಲಾಯಿತು.







