ರಾಮ ನವಮಿ ಹಿಂಸಾಚಾರದ ಬೆಂಕಿಗೆ ತುಪ್ಪ ಸುರಿದ ಕೇಂದ್ರ ಸಚಿವ ಬಾಬುಲ್ ಸುಪ್ರಿಯೊ

ಅಸನ್ಸೋಲ್, ಮಾ.30: ಪಶ್ಚಿಮ ಬಂಗಾಳದಲ್ಲಿ ರಾಮ ನವಮಿ ಮೆರವಣಿಗೆಯ ವೇಳೆ ನಡೆದ ಹಿಂಸಾಚಾರದಿಂದ ತತ್ತರಿಸಿ ಹೋಗಿರುವ ಪ್ರದೇಶಗಳಲ್ಲಿ ಒಂದಾಗಿರುವ ಅಸನ್ಸೋಲ್‌ನಲ್ಲಿ ತನ್ನ ವಿರುದ್ಧ ಘೋಷಣೆಗಳನ್ನು ಕೂಗಿದ ಜನರ ಜೀವಂತ ಚರ್ಮ ಸುಲಿಯುವುದಾಗಿ ಬೆದರಿಕೆ ಹಾಕುವ ಮೂಲಕ ಬಿಜೆಪಿ ಸಚಿವ ಬಾಬುಲ್ ಸುಪ್ರಿಯೊ ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ, ಬಾಬುಲ್ ಸುಪ್ರಿಯೊ ಗುರುವಾರದಂದು ಅಸನ್ಸೋಲ್‌ನ ಕಲ್ಯಾಣಪುರದಲ್ಲಿರುವ ನಿರಾಶ್ರಿತರ ಶಿಬಿರಕ್ಕೆ ಭೇಟಿ ನೀಡಲು ತೆರಳಿದಾಗ ಪೊಲೀಸರು ಅವರನ್ನು ತಡೆದಿದ್ದರು. ಸುಪ್ರಿಯೊ ವಿರುದ್ಧ ಐಪಿಸಿ ಸೆಕ್ಷನ್ 144ರಡಿ ನಿಷೇಧಾಜ್ಞೆ ಉಲ್ಲಂಘನೆ, 146, 147,148 (ದಂಗೆ) ಮತ್ತು 353 (ಸರಕಾರಿ ಅಧಿಕಾರಿ ತನ್ನ ಕರ್ತವ್ಯ ನಿಭಾಯಿಸದಂತೆ ಹಲ್ಲೆ ಅಥವಾ ಒತ್ತಡ) ಅಡಿ ದೂರು ದಾಖಲಿಸಲಾಗಿತ್ತು. ಸರಕಾರಿ ಅಧಿಕಾರಿ ಮೇಲೆ ಹಲ್ಲೆ ಜಾಮೀನುರಹಿತ ಅಪರಾಧವಾಗಿದೆ.
ಈ ಬಗ್ಗೆ ಮಾಧ್ಯಮಗಳು ಕೇಳಿದ ಸ್ಪಷ್ಟನೆಗೆ ಉತ್ತರಿಸಿದ ಸುಪ್ರಿಯೊ, ಘಟನೆ ನಡೆದ ಸ್ಥಳದಲ್ಲಿ ಎರಡು-ಮೂರು ಮಂದಿ ಟಿಎಂಸಿಯ ಕಾರ್ಯಕರ್ತರಿದ್ದರು. ಅವರು ನನ್ನ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದರು ಮತ್ತು ಗೊಂದಲ ಸೃಷ್ಟಿಸಲು ಯತ್ನಿಸುತ್ತಿದ್ದರು. ಅಲ್ಲಿ ಎರಡು ವೃದ್ಧೆಯರು ಅಳುವುದನ್ನು ಕಂಡು ನಾನು ನನ್ನ ವಾಹನ ನಿಲ್ಲಿಸಿದೆ. ಅವರು ನನ್ನಲ್ಲಿ ಮಾತನಾಡಲು ಬಯಸಿದ್ದರು. ಆದರೆ ದುಷ್ಕರ್ಮಿಗಳು ಆ ಮಹಿಳೆಯರನ್ನು ದೂರ ದೂಡಿದರು. ಪೊಲೀಸರಿಗೆ ಅವರನ್ನು ತಡೆಯಬಹುದಿತ್ತು. ಆದರ ಬದಲಾಗಿ ಅವರು ನನ್ನನ್ನೇ ತಡೆದರು ಎಂದು ಸಮಜಾಯಿಷಿ ನೀಡಿದ್ದಾರೆ.
ಚರ್ಮ ಸುಲಿಯುತ್ತೇನೆ ಎಂದು ನಾನು ಹೇಳಿರುವುದು ಆ ಕ್ಷಣದ ಕೋಪದಿಂದ ಎಂದು ಬಿಜೆಪಿ ಕೇಂದ್ರ ಸಚಿವ ತಿಳಿಸಿದ್ದಾರೆ. ಅಸನ್ಸೋಲ್ ಗಲಭೆಗೆ ಸಂಬಂಧಪಟ್ಟಂತೆ ಪೊಲೀಸರು ಈವರೆಗೆ 60 ಜನರನ್ನು ಬಂಧಿಸಿದ್ದಾರೆ. ಶನಿವಾರದಂದು ಹನುಮಾನ್ ಜಯಂತಿಯ ಸಂದರ್ಭದಲ್ಲಿ ರಾಜ್ಯದ್ಯಾಂತ ಕಟ್ಟೆಚ್ಚರವಹಿಸುವಂತೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪೊಲೀಸರಿಗೆ ಸೂಚನೆ ನೀಡಿದ್ದಾರೆ. ರಾಜ್ಯ ಸರಕಾರವು ಅಸನ್ಸೋಲ್ ಮತ್ತು ರಾಣಿಗಂಜ್‌ನಲ್ಲಿ ಮಾರ್ಚ್ 30ರವರೆಗೆ ಅಂತರ್ಜಾಲ ಸಂಪರ್ಕವನ್ನು ಕಡಿತಗೊಳಿಸಿದೆ.







