ಉಪ್ಪಿನಂಗಡಿ: ಹಗ್ಗ ಕೊರಳಿಗೆ ಸಿಲುಕಿ ಬಾಲಕಿ ಮೃತ್ಯು

ಉಪ್ಪಿನಂಗಡಿ, ಮಾ. 30: ಆಟವಾಡಲೆಂದು ಕಟ್ಟಿದ ಹಗ್ಗಕ್ಕೆ ಸಿಲುಕಿ ಬಾಲಕಿ ಮೃತಪಟ್ಟ ಹೃದಯ ವಿದ್ರಾವಕ ಘಟನೆ ಉಪ್ಪಿನಂಗಡಿಯ ನಟ್ಟಿಬೈಲ್ ಎಂಬಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಮೂಲತಃ ಉತ್ತರ ಪ್ರದೇಶದ ನಿವಾಸಿ ಪ್ರಸಕ್ತ ಉಪ್ಪಿನಂಗಡಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸ್ತವ್ಯ ಇರುವ ರಾಜಕುಮಾರ್ ಚೌಹಾನ್ ಮತ್ತು ಸರಿತಾ ಚೌಹಾನ್ ದಂಪತಿಯ ಪುತ್ರಿ ಅಂಜಲಿ ಚೌಹಾನ್ (13) ಮೃತಪಟ್ಟ ಬಾಲಕಿ.
ಆಕೆ ಉಪ್ಪಿನಂಗಡಿ ಶ್ರೀ ರಾಮ ವಿದ್ಯಾಲಯದ 7 ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದು, ಗುಡ್ ಫ್ರೈಡೆ ನಿಮಿತ್ತ ಶಾಲೆಗೆ ರಜೆಯಿತ್ತು. ಮನೆಯಲ್ಲಿ ತಾಯಿಯೊಂದಿಗೆ ಬೀಡಿಗೆ ಲೇಬಲ್ ಹಾಕಿ, ಸಂಜೆ ತನ್ನ ತಮ್ಮ ಅಮನ್ ಜೊತೆ ಅಂಜಲಿ ಆಟವಾಡಿದ್ದಳು. ಆದರೆ ದುರಾದೃಷ್ಟವಶಾತ್ ಅಂಜಲಿ ಮನೆಯೊಳಗೆ ವೇಗವಾಗಿ ಹೋಗುವ ವೇಳೆ ತಮ್ಮನಿಗೆ ಆಟವಾಡಲು ಕಟ್ಟಿದ್ದ ತೆಳುವಾದ ಹಗ್ಗ ಆಕೆಯ ಕುತ್ತಿಗೆಗೆ ಸಿಲುಕಿ, ಕುಣಿಕೆಯಂತಾಗಿ ಅಸ್ವಸ್ಥಳಾಗಿದ್ದು, ಕೂಡಲೇ ಮನೆ ಮಂದಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾದರೂ ಆಕೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





