ನೀತಿ ಸಂಹಿತೆ ಉಲ್ಲಂಘನೆ: ಇಬ್ಬರ ವಿರುದ್ಧ ಮೊಕದ್ದಮೆ; ಕರಪತ್ರ, ವಿಮಾ ಅರ್ಜಿ ವಶ
ಕೋಟ, ಮಾ.30: ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯ ಕಾರಣಕ್ಕಾಗಿ ಸಾಸ್ತಾನದ ಬಳಿ ರೂಮೊಂದರಲ್ಲಿ ಶೇಖರಿಸಿಟ್ಟಿದ್ದ ಸಾವಿರಕ್ಕೂ ಅಧಿಕ ಕರಪತ್ರ ಹಾಗೂ ವಿಮಾ ಅರ್ಜಿಫಾರಂಗಳನ್ನು ಕುಂದಾಪುರ ಉಪವಿಭಾಗಾಧಿಕಾರಿ ಭೂಬಾಲನ್ ನೇತೃತ್ವದ ಪೊಲೀಸ್ ಮತ್ತು ಚುನಾವಣಾ ಫ್ಲಯಿಂಗ್ ಸ್ಕ್ವಾಡ್ ಇಂದು ಸಂಜೆ ವಶಪಡಿಸಿಕೊಂಡಿದೆ ಎಂದು ಕೋಟ ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಸಾಸ್ತಾನದ ರೂಮೊಂದಕ್ಕೆ ದಾಳಿ ನಡೆಸಿದ ತಂಡ, ಅಲ್ಲಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ನಾಯಕರಾದ ಸಂತೋಷ್ ಲಾಡ್, ರಾಕೇಶ್ ಮಲ್ಲಿ ಅವರ ಭಾವಚಿತ್ರಗಳಿರುವ ಸಾವಿರಾರು ಕರಪತ್ರಗಳು ಹಾಗೂ ಇಂಟಕ್ ರಾಜ್ಯಾಧ್ಯಕ್ಷ ರಾಕೇಶ್ ಮಲ್ಲಿಯವರ ಹೆಸರಿನಲ್ಲಿದ್ದ ಇನ್ಸೂರೆನ್ಸ್ ಅರ್ಜಿ ಫಾರಂಗಳನ್ನು ಭೂಬಾಲನ್ ನೇತೃತ್ವದ ಪೊಲೀಸ್ ಹಾಗೂ ಫ್ಲಯಿಂಗ್ ಸ್ಕ್ವಾಡ್ ವಶಪಡಿಸಿಕೊಂಡಿದೆ.
ಈ ಸಂಬಂಧ ಬೈಂದೂರು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರವಿಶಂಕರ್ ಅವರು ನೀಡಿದ ದೂರಿನಂತೆ ಶರತ್ ಹಾಗೂ ಸತೀಶ್ ಎಂಬವರ ವಿರುದ್ಧ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.





