ಎ.1ರಿಂದ ಅಂತಾರಾಜ್ಯ ಸರಕು ಸಾಗಾಣಿಕೆಗೆ ಇ-ವೇ ಬಿಲ್ ಕಡ್ಡಾಯ

ಹೊಸದಿಲ್ಲಿ,ಮಾ.30: ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ 50,000 ರೂ.ಗೂ ಅಧಿಕ ಮೌಲ್ಯದ ಸರಕುಗಳ ಸಾಗಾಣಿಕೆಗೆ ಇ-ವೇ ಬಿಲ್‌ಗಳನ್ನು ಹೊಂದಿರುವುದು ಎ.1ರಿಂದ ಕಡ್ಡಾಯವಾಗಲಿದೆ.
ತೆರಿಗೆ ವಂಚನೆಯನ್ನು ತಡೆಯುವ ಕ್ರಮವೆಂದು ಬಿಂಬಿಸಲಾ ಗಿರುವ ಇ-ವೇ ಬಿಲ್ ಈಗ ನಗದು ಆಧಾರದಲ್ಲಿ ನಡೆಯುತ್ತಿ ರುವ ವ್ಯಾಪಾರಗಳಿಗೆ ಕಡಿವಾಣ ಹಾಕುವ ಮೂಲಕ ತೆರಿಗೆ ಸಂಗ್ರಹವನ್ನು ಹೆಚ್ಚಿಸಲು ನೆರವಾಗಲಿದೆ.
ಜಿಎಸ್‌ಟಿಯಲ್ಲಿಯ ಇ-ವೇ ಬಿಲ್ ನಿಯಮವನ್ನು ಮೊದಲ ಬಾರಿಗೆ ಫೆ.1ರಂದು ಜಾರಿಗೊಳಿಸಲಾಗಿತ್ತು. ಆದರೆ ಕಂಪ್ಯೂಟರ್ ಮೂಲಕ ಪರವಾನಿಗೆಗಳನ್ನು ಸೃಷ್ಟಿಸುವ ವ್ಯವಸ್ಥೆಯಲ್ಲಿ ತಾಂತ್ರಿಕ ತೊಂದರೆಗಳು ತಲೆದೋರಿದ್ದರಿಂದ ಅದನ್ನು ನಂತರ ತಡೆಹಿಡಿಯಲಾಗಿತ್ತು. ಹಲವಾರು ರಾಜ್ಯಗಳೂ ಅಂತಾರಾಜ್ಯ ಇ-ವೇ ಬಿಲ್‌ಗಳನ್ನು ಸೃಷ್ಟಿಸಲು ಆರಂಭಿಸಿದ್ದು ಈ ತಾಂತ್ರಿಕ ತೊಂದರೆಗಳಿಗೆ ಕಾರಣವಾಗಿತ್ತು.
ಇದೀಗ ದೋಷಮುಕ್ತ ವ್ಯವಸ್ಥೆಯನ್ನು ಖಚಿತಪಡಿಸಲು ಜಿಎಸ್‌ಟಿಎನ್ ತನ್ನ ಪೋರ್ಟಲ್‌ನಲ್ಲಿ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಸರಕುಗಳ ಸಾಗಾಣಿಕೆಯ ಸಂದರ್ಭದಲ್ಲಿ ಇ-ವೇ ಬಿಲ್ ಅನ್ನು ಸೃಷ್ಟಿಸುವ ಸೌಲಭ್ಯವನ್ನು ಮಾತ್ರ ಒದಗಿಸಿದೆ.
ಎ.1ರಿಂದ ಅಂತಾರಾಜ್ಯ ಮತ್ತು ಎ.15ರಿಂದ ಅಂತಾರಾಜ್ಯ ಇ-ವೇ ಬಿಲ್‌ಗಳನ್ನು ಹಂತಹಂತವಾಗಿ ಜಾರಿಗೊಳಿಸಲು ಜಿಎಸ್‌ಟಿ ಮಂಡಳಿಯು ಈ ತಿಂಗಳ ಆರಂಭದಲ್ಲಿ ನಿರ್ಧರಿಸಿತ್ತು.
ಈಗ ಅದು ತನ್ನ ಪೋರ್ಟ್‌ಲ್‌ನ್ನು ಇನ್ನಷ್ಟು ಸದೃಢಗೊಳಿಸಿದ್ದು, ದಿನವೊಂದಕ್ಕೆ ಯಾವುದೇ ತೊಂದರೆಯಿಲ್ಲದೆ 75 ಲಕ್ಷದಷ್ಟು ಅಂತರರಾಜ್ಯ ಇ-ವೇ ಬಿಲ್‌ಗಳನ್ನು ಸೃಷ್ಟಿಸಬಹುದಾಗಿದೆ. ರಾಷ್ಟ್ರೀಯ ಮಾಹಿತಿ ಕೇಂದ್ರವು ಈ ವ್ಯವಸ್ಥೆಯನ್ನು ವಿನ್ಯಾಸಗೊಳಿಸಿ ಅಭಿವೃದ್ಧಿಗೊಳಿಸಿದೆ.







