ಪಾಕಿಸ್ತಾನದ ಐಎಸ್‌ಐ ಪರ ಬೇಹುಗಾರಿಕೆ ನಡೆಸುತ್ತಿದ್ದ ವ್ಯಕ್ತಿಯ ಬಂಧನ

ಅಮೃತಸರ, ಮಾ. 30: ಪಾಕಿಸ್ತಾನದ ಐಎಸ್‌ಐಯ ಬೇಹುಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದ ಆರೋಪದಲ್ಲಿ ವ್ಯಕ್ತಿಯೋರ್ವನನ್ನು ರಾಜ್ಯ ವಿಶೇಷ ಕಾರ್ಯಾಚರಣೆ ಘಟಕ (ಎಸ್‌ಎಸ್‌ಒಸಿ) ಹಾಗೂ ಸೇನಾ ಬೇಹುಗಾರರು ಗುರುವಾರ ಬಂಧಿಸಿದ್ದಾರೆ ಎಂದು ಪಂಜಾಬ್ ಪೊಲೀಸರು ತಿಳಿಸಿದ್ದಾರೆ.
ಖಚಿತ ಮಾಹಿತಿ ಆಧಾರದಲ್ಲಿ ಇನ್ಸ್‌ಪೆಕ್ಟರ್ ಗುರಿಂದರ್‌ಪಾಲ್ ಸಿಂಗ್ ನೇತೃತ್ವದ ಎಸ್‌ಎಸ್‌ಒಸಿ ತಂಡ ಅಮೃತಸರ ಜಿಲ್ಲೆಯ ಚಾಟಿವಿಂಡ್ ಪೊಲೀಸ್ ಠಾಣಾ ವ್ಯಾಪ್ತಿಯಿಂದ ರವಿ ಕುಮಾರ್ ಎಂಬಾತನನ್ನು ಬಂಧಿಸಿತು. ಪ್ರಮುಖ ಕಟ್ಟಡಗಳ ಛಾಯಾಚಿತ್ರಗಳು, ನಿಷೇಧಿತ ಪ್ರದೇಶಗಳ ಕೈಯಲ್ಲಿ ತಯಾರಿಸಿದ ನಕ್ಷೆಗಳು, ಸೇನೆಯ ತರಬೇತಿ ಕೈಪಿಡಿಯ ಝೆರಾಕ್ಸ್ ಪ್ರತಿ, ಸೇನಾ ದಾಳಿಗೆ ಸಂಬಂಧಿಸಿದ ಮಾಹಿತಿಗಳು ಈತನಲ್ಲಿ ಪತ್ತೆಯಾಗಿವೆ ಎಂದು ಪಂಜಾಬ್ ಪೊಲೀಸರು ತಿಳಿಸಿದ್ದಾರೆ.
ವಿವಿಧ ಕಲಮುಗಳ ಅಡಿಯಲ್ಲಿ ಈತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಏಳು ತಿಂಗಳ ಹಿಂದೆ ಫೇಸ್‌ಬುಕ್ ಮೂಲಕ ಪಾಕಿಸ್ತಾನದ ಐಎಸ್‌ಐ ಅಧಿಕಾರಿಗಳು ತನ್ನನ್ನು ನಿಯೋಜಿಸಿದ್ದಾರೆ ಎಂದು ಪ್ರಾಥಮಿಕ ವಿಚಾರಣೆ ವೇಳೆ ಕುಮಾರ್ ಬಹಿರಂಗಪಡಿಸಿದ್ದಾನೆ.
ಸೇನಾ ಘಟಕಗಳ ಚಲನವಲನ, ಭಾರತೀಯ ಭಾಗದ ಗಡಿಯಲ್ಲಿ ನಿರ್ಮಿಸುತ್ತಿರುವ ನೂತನ ಬಂಕರ್, ಸೇನಾ ವಾಹನಗಳ ಭಾವಚಿತ್ರಗಳು, ಸೇನೆಯ ರಚನೆ ಸೂಚನೆ, ಸಮರಾಭ್ಯಾಸ, ತರಬೇತಿ ಹಾಗೂ ಚಟುವಟಿಕ/ನಿರ್ಮಾಣದ ಕುರಿತು ಈತ ಐಎಸ್‌ಐಗೆ ಮಾಹಿತಿ ನೀಡುತ್ತಿದ್ದ ಎಂದು ಹೇಳಿಕೆ ತಿಳಿಸಿದೆ.
ಐಎಸ್‌ಐ ನಿರ್ವಾಹಕ ಕುಮಾರ್‌ಗೆ ಫೆಬ್ರವರಿ 20ರಿಂದ 24ರ ವರೆಗೆ ದುಬೈಗೆ ಭೇಟಿ ಆಯೋಜಿಸಲಾಗಿತ್ತು. ಈ ಸಂದರ್ಭ ಆತನಿಗೆ ಗುರಿಯ ಬಗ್ಗೆ ತಿಳಿಸಲಾಗಿತ್ತು ಎಂದು ಕುಮಾರ್ ವಿಚಾರಣೆ ವೇಳೆ ತಿಳಿಸಿದ್ದಾನೆ. ಮೊಬೈಲ್‌ಫೋನ್ ಹಾಗೂ ಇಂಟರ್‌ನೆಟ್ ಮೂಲಕ ಕುಮಾರ್ ಪಾಕಿಸ್ತಾನದ ಐಎಸ್‌ಐ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕ ಇರಿಸಿಕೊಂಡಿದ್ದ. ದುಬೈ ಮೂಲಕ ಹಣ ನೀಡಲಾಗುತ್ತಿತ್ತು ಎಂದು ಕುಮಾರ್ ಬಹಿರಂಗಪಡಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.







