ಸಿಬಿಎಸ್‌ಇ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ: ಇನ್ನೂ 10 ಮಂದಿಯ ವಿಚಾರಣೆ

ಹೊಸದಿಲ್ಲಿ, ಮಾ.30: ಸಿಬಿಎಸ್‌ಇ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿ ದಿಲ್ಲಿ ಕ್ರೈಂಬ್ರಾಂಚ್ ಪೊಲೀಸರು ಇನ್ನೂ 10 ಮಂದಿಯ ವಿಚಾರಣೆ ನಡೆಸಿದ್ದಾರೆ. ಅಲ್ಲದೆ ಸಿಬಿಎಸ್‌ಇ ಪರೀಕ್ಷಾ ನಿಯಂತ್ರಕರ ಜೊತೆ ಸಂವಹನ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಗುರುವಾರದ ಬಳಿಕ ಒಟ್ಟು 35 ಮಂದಿಯ ವಿಚಾರಣೆ ನಡೆಸಿದಂತಾಗಿದೆ. ಇದರಲ್ಲಿ ಕೋಚಿಂಗ್ ಕೇಂದ್ರದ ಮಾಲಕ, ಅದರ ಕೆಲ ಶಿಕ್ಷಕರು, 18 ವಿದ್ಯಾರ್ಥಿಗಳು ಸೇರಿದ್ದಾರೆ.
ಸಿಬಿಎಸ್‌ಇ ಪರೀಕ್ಷೆಯ ಪ್ರಕ್ರಿಯೆಯ ಬಗ್ಗೆ ಮಾಹಿತಿ ಪಡೆಯುವ ಉದ್ದೇಶದಿಂದ ಸಿಬಿಎಸ್‌ಇ ಪರೀಕ್ಷಾ ನಿಯಂತ್ರಕರ ಜೊತೆ ಪೊಲೀಸರು ಸುಮಾರು 2 ಗಂಟೆಗಳ ಕಾಲ ಸಂವಹನ ನಡೆಸಿದ್ದಾರೆ. ಪ್ರಶ್ನೆಪತ್ರಿಕೆ ಹೇಗೆ ಸಿದ್ಧಪಡಿಸಲಾಗುತ್ತದೆ , ಬಳಿಕ ಅವುಗಳನ್ನು ಎಲ್ಲಿ ಶೇಖರಿಸಿಡಲಾಗುತ್ತದೆ ಮತ್ತು ವಿವಿಧ ಪರೀಕ್ಷಾ ಕೇಂದ್ರಗಳಿಗೆ ವಿತರಿಸುವ ಪ್ರಕ್ರಿಯೆಯ ಬಗ್ಗೆ ಮಾಹಿತಿ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಿಬಿಎಸ್‌ಇ ಪ್ರಾದೇಶಿಕ ನಿರ್ದೇಶಕರ ದೂರಿನಂತೆ ಅರ್ಥಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆಯಾದ ಬಗ್ಗೆ ಮಾ.27ರಂದು ಹಾಗೂ ಗಣಿತ ಪ್ರಶ್ನೆಪತ್ರಿಕೆ ಸೋರಿಕೆಯಾದ ಬಗ್ಗೆ ಮಾ.28ರಂದು ದಿಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 10ನೇ ತರಗತಿಯ ಗಣಿತ ಪರೀಕ್ಷೆಯ
ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವ ಬಗ್ಗೆ ಸಿಬಿಎಸ್‌ಇ ಅಧ್ಯಕ್ಷರಿಗೆ ಪರೀಕ್ಷೆಯ ಹಿಂದಿನ ದಿನ ಇ-ಮೇಲ್ ಮೂಲಕ ಮಾಹಿತಿ ಬಂದಿದೆ . ಪ್ರಶ್ನೆಪತ್ರಿಕೆ ವಾಟ್ಸಾಪ್‌ನಲ್ಲಿ ಬಹಿರಂಗವಾಗಿರುವ ಕಾರಣ ಪರೀಕ್ಷೆಯನ್ನು ರದ್ದುಗೊಳಿಸಬೇಕು ಎಂದು ಮನವಿ ಮಾಡಿಕೊಳ್ಳಲಾಗಿದೆ . ಅಲ್ಲದೆ ಗಣಿತ ಪ್ರಶ್ನೆಪತ್ರಿಕೆಯ ಕೈಬರಹದ ಪ್ರತಿಯನ್ನು ಕಳಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಪ್ರಕರಣದ ತನಿಖೆ ನಡೆಸಲು ಇಬ್ಬರು ಡಿಸಿಪಿ, ನಾಲ್ಕು ಮಂದಿ ಎಸಿಪಿ ಹಾಗೂ ಐವರು ಇನ್‌ಸ್ಪೆಕ್ಟರ್‌ಗಳನ್ನು ಹೊಂದಿರುವ ವಿಶೇಷ ತನಿಖಾ ತಂಡ(ಎಸ್‌ಐಟಿ)ವನ್ನು ರಚಿಸಲಾಗಿದೆ. ಜಂಟಿ ಪೊಲೀಸ್ ಆಯುಕ್ತ(ಅಪರಾಧ ವಿಭಾಗ)ರು ಈ ತಂಡದ ಮೇಲ್ವಿಚಾರಕರಾಗಿರುತ್ತಾರೆ.







