ಸಿಬಿಎಸ್‌ಇ ಪತ್ರಿಕೆ ಸೋರಿಕೆಯ 13 ದಿನಗಳಲ್ಲಿ ನಡೆದದ್ದೇನು?
ಅಪರಿಚಿತ ಕರೆ, ಪತ್ರ ಮತ್ತು ಟ್ವಿಟರ್‌ನಲ್ಲಿ ಪ್ರಶ್ನೆ ಪತ್ರಿಕೆ

ಹೊಸದಿಲ್ಲಿ, ಮಾ.30: ಮಾರ್ಚ್ 13ರಂದು ಪರೀಕ್ಷೆಗೆ ಎರಡು ದಿನಗಳ ಮೊದಲು ರೋಹಿಣಿಯಲ್ಲಿರುವ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆಯೊಂದು ಬಂದಿತ್ತು. ಅದರಲ್ಲಿ ಸಿಬಿಎಸ್‌ಇ 12ನೇ ತರಗತಿಯ ಲೆಕ್ಕಶಾಸ್ತ್ರದ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು ತಿಳಿಸಲಾಗಿತ್ತು. ಕರೆ ಮಾಡಿದ ವ್ಯಕ್ತಿ, ತನ್ನ ಟ್ಯೂಶನ್ ಗೆಳೆಯನೊಬ್ಬ 4,000 ರೂ.ಗೆ ತನಗೆ ಲೆಕ್ಕಶಾಸ್ತ್ರದ ಪ್ರಶ್ನೆಪತ್ರಿಕೆಯನ್ನು ನೀಡುವುದಾಗಿ ಹೇಳಿದ್ದಾನೆ ಎಂದು ತಿಳಿಸಿದ್ದ. ಅಲ್ಲಿಂದಲೇ ಸಿಬಿಎಸ್‌ಇ ಪ್ರಶ್ನೆ ಪತ್ರಿಕೆ ಸೋರಿಕೆಯ ಘಟನಾವಳಿಗಳು ಒಂದರ ಹಿಂದೆ ಒಂದರಂತೆ ತೆರೆದುಕೊಳ್ಳಲು ಆರಂಭವಾಯಿತು ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.
ಕರೆ ಮಾಡಿದವನನ್ನು ಪತ್ತೆ ಮಾಡಲು ಯತ್ನಿಸಿದ ರೋಹಿಣಿಯ ಸಹಾಯಕ ಆಯುಕ್ತ ರಜನೀಶ್ ಗುಪ್ತಾ ಮತ್ತು ತಂಡಕ್ಕೆ ನಿರಾಶೆ ಕಾದಿತ್ತು. ಯಾಕೆಂದರೆ, ಆ ಅಪರಿಚಿತ ವ್ಯಕ್ತಿ ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿದ್ದ ಮತ್ತು ಆತ ಸಿಮ್‌ಗಾಗಿ ನೀಡಿದ್ದ ವಿಳಾಸ ಅಪೂರ್ಣವಾಗಿತ್ತು. ಹಾಗಾಗಿ ಈ ಬಗ್ಗೆ ತನಿಖೆಯನ್ನು ಅಲ್ಲಿಗೇ ನಿಲ್ಲಿಸಲಾಯಿತು. ಆದರೆ ಮಾರ್ಚ್ 15ರಂದು ಪರೀಕ್ಷೆ ಆರಂಭಕ್ಕೂ ಕೆಲವೇ ನಿಮಿಷಗಳ ಮೊದಲು ಹತ್ತು ಪುಟಗಳ ಲೆಕ್ಕಶಾಸ್ತ್ರ ಪತ್ರಿಕೆಯು ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡುವ ಮೂಲಕ ಇಡೀ ದೇಶವನ್ನೇ ಆಘಾತಗೊಳಿಸಿತ್ತು. ವಾಟ್ಸ್‌ಆ್ಯಪ್ ಸಂದೇಶದಲ್ಲಿ ಹರಿದಾಡಿದ ಪತ್ರಿಕೆಯು ಲೆಕ್ಕಶಾಸ್ತ್ರದ 2ನೇ ಭಾಗದ ಪ್ರಶ್ನೆಗಳನ್ನೇ ಹೋಲುತ್ತಿದ್ದವು. ದಿಲ್ಲಿ ಶಿಕ್ಷಣ ಸಚಿವ ಮನೀಶ್ ಸಿಸೋಡಿಯ ಕೂಡಾ ತಮಗೆ ಸಿಕ್ಕ ವಾಟ್ಸ್‌ಆ್ಯಪ್ ಸಂದೇಶವನ್ನು ಟ್ವೀಟ್ ಮಾಡುವ ಮೂಲಕ ಸೋರಿಕೆಯಾಗಿರುವುದು ದೃಢಪಟ್ಟಿತ್ತು.
ಆದರೆ ಸಿಬಿಎಸ್‌ಇ ಮಾತ್ರ ಪ್ರಶ್ನೆ ಪತ್ರಿಕೆ ಸೋರಿಕೆಯಾಗಲು ಸಾಧ್ಯವಿಲ್ಲ. ಯಾಕೆಂದರೆ ಪ್ರಶ್ನೆ ಪತ್ರಿಕೆಗಳನ್ನು ಪ್ಯಾಕ್ ಮಾಡಲಾಗಿದ್ದ ಪೆಟ್ಟಿಗೆಗಳ ಸೀಲ್‌ಗಳು ಹಾಗೆಯೇ ಇವೆ ಎಂದು ವಿವರಣೆ ನೀಡಿತ್ತು. ಮಾರ್ಚ್ 23ರಂದು ಸಿಬಿಎಸ್‌ಇಗೆ ಅಪರಿಚಿತ ಮೂಲದಿಂದ ಬಂದ ಫ್ಯಾಕ್ಸ್‌ನಲ್ಲಿ ದಿಲ್ಲಿಯ ರಾಜೇಂದ್ರ ನಗರದ ಟ್ಯೂಶನ್ ಕೇಂದ್ರ ಮಾಲಕ ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಭಾಗಿಯಾಗಿದ್ದಾನೆ ಎಂದು ಆರೋಪಿಸಿತ್ತು. ಇದೇ ಪ್ರದೇಶದ ಎರಡು ಶಾಲೆಗಳ ಹೆಸರನ್ನು ಸೂಚಿಸಿದ್ದ ಅಪರಿಚಿತ ವ್ಯಕ್ತಿ ಈ ಎರಡು ಶಾಲೆಗಳು ಕೂಡಾ ಅಪರಾಧದಲ್ಲಿ ಭಾಗಿಯಾಗಿವೆ ಎಂದು ತಿಳಿಸಿದ್ದ. ಆರಂಭದಲ್ಲಿ ಸಿಬಿಎಸ್‌ಇ ಅಧಿಕಾರಿಗಳು ಇದೊಂದು ವದಂತಿ ಎಬ್ಬಿಸುವ ಪ್ರಯತ್ನ ಎಂದು ತಳ್ಳಿಹಾಕಿದ್ದರೂ ನಂತರ ಪೊಲೀಸ್ ಇಲಾಖೆಗೆ ಈ ಬಗ್ಗೆ ಮಾಹಿತಿ ನೀಡಿದ್ದರು. ಇದೇ ವೇಳೆ, ಮಾರ್ಚ್ 26ರಂದು ಸಿಬಿಎಸ್‌ಇ 12ನೇ ತರಗತಿಯ ವಿದ್ಯಾರ್ಥಿಗಳ ವಾಟ್ಸ್‌ಆ್ಯಪ್‌ನಲ್ಲಿ ಅರ್ಥಶಾಸ್ತ್ರ ಪ್ರಶ್ನೆ ಪತ್ರಿಕೆಗಳು ಹರಿದಾಡಲು ಆರಂಭಿಸಿದ್ದವು.
ಅದೇ ದಿನ ಸಂಜೆ ಸಿಬಿಎಸ್‌ಇಯ ದಿಲ್ಲಿ ವಿಭಾಗಕ್ಕೆ ಅಪರಿಚಿತ ಮೂಲದಿಂದ ಪತ್ರವೊಂದು ಬಂದಿತ್ತು. ಅದರೊಳಗೆ ಆ ದಿನ ನಡೆಯಲಿದ್ದ ಅರ್ಥಶಾಸ್ತ್ರ ಪರೀಕ್ಷೆಯ ಹತ್ತು ಪುಟಗಳ ಉತ್ತರಗಳ ಕೈಯಲ್ಲಿ ಬರೆಯಲಾಗಿದ್ದ ಪತ್ರಗಳಿದ್ದವು. ಸಿಬಿಎಸ್‌ಇ ಅಧಿಕಾರಿಗಳು ಮರುದಿನ ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಪೊಲೀಸರು ಪ್ರಶ್ನೆ ಪತ್ರಿಕೆ ಸೋರಿಕೆಯ ತನಿಖೆ ನಡೆಸುತ್ತಿದ್ದಂತೆ ಮಾರ್ಚ್ 28ರಂದು ಕೆಲವು ವಿದ್ಯಾರ್ಥಿಗಳು ಗಣಿತದ ಪತ್ರಿಕೆಗಳೂ ಸೋರಿಕೆಯಾಗಿದೆ ಎಂದು ಆರೋಪಿಸಿದ್ದರು.
ಸಿಬಿಎಸ್‌ಇಗೆ ಸಂಬಂಧಿಸಿದ ಟ್ವಿಟರ್‌ಗೆ ಬಂದ ಸಂದೇಶದಲ್ಲಿ ಮಾರ್ಚ್ 27ರಂದು ನಡೆಯಲಿದ್ದ ಗಣಿತ ಪರೀಕ್ಷೆಯ ಉತ್ತರಗಳುಳ್ಳ ಕೈಯಲ್ಲಿ ಬರೆದ ನಾಲ್ಕು ಪುಟಗಳ ಪತ್ರದ ಚಿತ್ರವನ್ನು ರವಾನಿಸಲಾಗಿತ್ತು. ಸದ್ಯ ಶೈಕ್ಷಣಿಕ ಕ್ಷೇತ್ರದಲ್ಲಿ ನಡೆದಿರುವ ಅತ್ಯಂತ ಖೇದಕರ ವಿದ್ಯಾಮಾನವು ವಿದ್ಯಾರ್ಥಿಗಳ ಭವಿಷ್ಯವನ್ನು ಅಪಹಾಸ್ಯಕ್ಕೀಡುಮಾಡಿದೆ. ಒಂದರ ಹಿಂದೆ ಒಂದರಂತೆ ನಡೆದಿರುವ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣವನ್ನು ಪೊಲೀಸ್ ಇಲಾಖೆ ತನಿಖೆ ನಡೆಸುತ್ತಿದೆ. ಇದಕ್ಕೆ ಸಂಬಂಧಿಸಿದಂತೆ 34 ಜನರನ್ನು ವಿಚಾರಣೆಗೊಳಪಡಿಸಲಾಗಿದೆ ಎಂದು ಪತ್ರಿಕೆ ವರದಿ ಮಾಡಿದೆ.







